ಮಂಗಳೂರು: ಕರಾವಳಿಯಲ್ಲಿ ಮೇ 2ರವರೆಗೆ ಬಿಸಿಗಾಳಿಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಅವಧಿಯಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆ ಸಾಧ್ಯತೆ ಇದೆ. ಶಾಖಾಘಾತದಿಂದ ಸನ್ ಸ್ಟೋಕ್ ಮತ್ತು ಇತರ ಸಮಸ್ಯೆ ಗಳಿಂದ ತಪ್ಪಿಸಿಕೊಳ್ಳಲು ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಹೊರಗೆ ಹೋಗಬಾರದು. ತೆಳುವಾದ, ಹಗುರ ಬಟ್ಟೆಗಳನ್ನು ಧರಿಸಬೇಕು, ನಿರ್ಜಲೀಕರಣವಾಗದಂತೆ ತಡೆಯಲು ಆಗಾಗ ನೀರು ಕುಡಿಯುತ್ತಿರಬೇಕು ಎಂದು ಮುನ್ಸೂಚನೆ ನೀಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಸೋಮವಾರ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಜಿಲ್ಲೆಯ ಬಹುತೇಕ ಕಡೆ ಸಂಜೆ ಹಾಗೂ ರಾತ್ರಿ ಮೋಡದ ವಾತಾವರಣ ಇರಲಿದೆ ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರ ತಿಳಿಸಿದೆ.