ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸಚಿವೆ ಲಕ್ಷ್ಮೀ ‌ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಫೈನಾನ್ಸ್ ಒಂದು ಮನೆಯನ್ನು ಜಪ್ತಿ ಮಾಡಿದ ಕಾರಣಕ್ಕೆ ಬಾಣಂತಿ ಹಾಗೂ ಬಡ ಕುಟುಂಬವೊಂದು ಬೀದಿಪಾಲಾಗಿ ಕಣ್ಣಿರಲ್ಲಿ ಕೈತೊಳೆಯುತ್ತಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಅಮಾವಾಸ್ಯೆ ದಿನದಂದು ಈ ಅಮಾನವೀಯ ಘಟನೆ ನಡೆದಿದೆ. ಏಕಾಏಕಿ ಮನೆಯನ್ನು ಜಪ್ತಿ‌ ಮಾಡಲಾಗಿದ್ದು, ಕಳೆದ ಒಂದು ತಿಂಗಳಿಂದ ಬಾಣಂತಿ ಬೀದಿ ಪಾಲಾಗಿದ್ದಾಳೆ.

ಬಾಣಂ‌ತಿ‌‌ ಎಂಬುದನ್ನು ನೋಡದೇ ಮನೆಯಿಂದ ಹೊರದಬ್ಬಿದವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ತಾರಿಹಾಳ ಗ್ರಾಮದ ಗಣಪತಿ ರಾಮಚಂದ್ರ ಲೋಹಾರ್ ಎಂಬುವರ ಮನೆ ಜಪ್ತಿ ಮಾಡಲಾಗಿದೆ.

ಆಪ್ಟಸ್ ವ್ಯಾಲ್ಯೂ ಹೌಸಿಂಗ್ ಎಂಬ ಫೈನಾನ್ಸ್‌ ನಲ್ಲಿ ಲೋಹಾರ್ ಕುಟುಂಬವು 5 ವರ್ಷಗಳ ಹಿಂದೆ ಮನೆ ನಿರ್ಮಾಣಕ್ಕಾಗಿ 5 ಲಕ್ಷ ಗೃಹಸಾಲ ಪಡೆದಿತ್ತು. ಮೂರು ವರ್ಷಗಳ ಕಾಲ ನಿರಂತರ ಕಂತು ತುಂಬಿದ್ದರು.

ವೃದ್ಧ ತಾಯಿಗೆ ಅನಾರೋಗ್ಯ, ಮಗಳ ಹೆರಿಗೆ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿಂದ ಕಂತು ಪಾವತಿ ಅಸಾಧ್ಯವಾಗಿತ್ತು. ಕಂತು ತುಂಬದ ಹಿನ್ನೆಲೆ ಕೋರ್ಟ್ ಮೊರೆ ಹೋಗಿದ್ದ ಫೈನಾನ್ಸ್ ಕೋರ್ಟ್ ಆದೇಶದಂತೆ ಪೊಲೀಸರು ಹಾಗೂ ವಕೀಲರ ಸಮ್ಮುಖದಲ್ಲಿ ಮನೆ ಸೀಜ್ ಮಾಡಲಾಗಿದೆ.

ಮನೆಯಲ್ಲಿ ಇದ್ದ ಒಂದು ತಿಂಗಳ ಬಾಣಂತಿ, ಕುಟುಂಬ ಬೀದಿಪಾಲಾಗಿದೆ. ಬೆಳಿಗ್ಗೆಯಿಂದ ಊಟವಿಲ್ಲದೇ ಕುಟುಂಬಸ್ಥರ ಕಣ್ಣೀರು ಹೇಳತೀರದಾಗಿದೆ.
ಮನೆಯಲ್ಲಿದ್ದ ವಸ್ತುಗಳನ್ನು ತೆಗೆದುಕೊಳ್ಳಲು ಬಿಡದೆ ಮನೆಯಿಂದ ಹೊರಹಾಕಿದ್ದಾರೆ ಎಂದು ಕಣ್ಣೀರು ಹಾಕುತ್ತಿದ್ದಾರೆ.

ಸದ್ಯ ಮನೆ ಪಕ್ಕ ಪುಟ್ಟ ಶೆಡ್ ನಲ್ಲಿ ಇಲ್ಲವೆ ಸಂಬಂಧಿಕರು ಮನೆಯಲ್ಲಿ ಈ ಬಡ ಕುಟುಂಬ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.

ಸಿಸೆರೀಯನ್ ಮೂಲಕ ಹೆರಿಗೆ ಆಗಿರುವ ಬಾಣಂತಿ ಫೈನಾನ್ಸ್ ಸಾಲದ ಶೂಲಕ್ಕೆ ಬೀದಿಪಾಲಾಗಿರುವ ಬಡ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವ ಹಾಗೆ ಆಗಿದೆ.

ಮತ್ತೊಂದೆಡೆ ಅನಾರೋಗ್ಯ, ಮನೆಯ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ ಲೋಹಾರ್ ಕುಟುಂಬಕ್ಕೆ ಮೂರು ವರ್ಷ ಕಟ್ಟಿರುವ ಕಂತಿನ ಸ್ಟೇಟ್‌ಮೆಂಟ್ ಕೊಡಲು ಬ್ಯಾಂಕ್ ಸಿಬ್ಬಂದಿಗಳು ಹಿಂದೇಟು ಹಾಕಿರುವ ಆರೋಪ ಕೇಳಿ ಬಂದಿದೆ.

ಬ್ಯಾಂಕ್ ಸ್ಟೇಟ್ ಮೆಂಟ್ ಕೊಡಲು ಹಣ ಕೇಳುತ್ತಿದ್ದಾರೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ.

ಸದ್ಯ 7.5 ಲಕ್ಷ ರೂಪಾಯಿ ಒಂದೇ ಹಂತದಲ್ಲಿ ಕಟ್ಟಿ ಎಂದು ಫೈನಾನ್ಸ್ ಸಿಬ್ಬಂದಿಗಳು ಹೇಳುತ್ತಿದ್ದಾರೆ ಎನ್ನಲಾಗಿದೆ.