ನವದೆಹಲಿ: 120 ಇಸ್ರೇಲಿ ಕಮಾಂಡೋಗಳು ಸಿರಿಯಾದಲ್ಲಿ ಭೂಗತವಾಗಿದ್ದ ಇರಾನ್ ಅನುದಾನಿತ ಕ್ಷಿಪಣಿ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ ಅತ್ಯಂತ ಉನ್ನತ ಕಾರ್ಯಾಚರಣೆಯ ವಿವರಗಳನ್ನು ಇಸ್ರೇಲಿ ಏರ್ ಫೋರ್ಸ್ (IAF) ಗುರುವಾರ ಬಹಿರಂಗಪಡಿಸಿದೆ.
“ಆಪರೇಷನ್ ಮೆನಿ ವೇಸ್” ಎಂಬ ಕೋಡ್‌ವರ್ಡ್‌ಹೆಸರಿನ ಕಾರ್ಯಾಚರಣೆಯನ್ನು 2024 ರ ಸೆಪ್ಟೆಂಬರ್ 8 ರಂದು ನಡೆಸಲಾಯಿತು ಎಂದು ಅದು ಹೇಳಿದೆ.
“ಡೀಪ್ ಲೇಯರ್” ಎಂದು ಕರೆಯಲ್ಪಡುವ ಈ ಭೂಗತ ಕ್ಷಿಪಣಿ ತಯಾರಿಕಾ ಘಟಕವು ಪಶ್ಚಿಮ ಸಿರಿಯಾದ ಮಾಸ್ಯಾಫ್ ಪ್ರದೇಶದ ಬಳಿ ಇದೆ ಎಂದು ಹೇಳಲಾಗಿದೆ, ಈ ಪ್ರದೇಶವು ಸಿರಿಯಾದ ವಾಯು ಸೇನೆಯ ರಕ್ಷಣೆಯಲ್ಲಿರುವ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿದೆ. ಇರಾನ್‌ನ ಕ್ಷಿಪಣಿ ತಯಾರಿಕೆ ಮಾಡುವ ಪ್ರಮುಖ ಯೋಜನೆಯಾದ ಈ ಘಟಕವು, ಲೆಬನಾನ್‌ನ ಹೆಜ್ಬೊಲ್ಲಾಹ್ ಮತ್ತು ಸಿರಿಯಾದಲ್ಲಿನ ಅಸ್ಸಾದ್ ಆಡಳಿತಕ್ಕೆ ಬೇಕಾದ ಕ್ಷಿಪಣಿಗಳನ್ನು ಪೂರೈಸುವ ಸಲುವಾಗಿ ನಿರ್ಮಾಣವಾಗಿತ್ತು ಎಂದು ಇಸ್ರೇಲಿ ಅಧಿಕಾರಿಗಳು ಹೇಳಿದ್ದಾರೆ. ಇಸ್ರೇಲ್ ಪಡೆಗಳಲ್ಲಿ ಯಾರೊಬ್ಬರಿಗೂ ಯಾವುದೇ ಗಾಯಗಳಾಗದೆ ಈ ಉನ್ನತಮಟ್ಟದ ಕಾರ್ಯಾಚರಣೆ ನಡೆಸಲಾಯಿತು ಎಂದು ಇಸ್ರೇಲಿ ಅಧಿಕಾರಿಗಳು ಹೇಳಿದ್ದಾರೆ.
ಇಸ್ರೇಲಿ ಏರ್ ಫೋರ್ಸ್ (IAF) ಪ್ರಕಾರ, ಇರಾನ್‌ನ ಡೀಪ್ ಲೇಯರ್ ಘಟಕದ ನಿರ್ಮಾಣವು 2017 ರ ಕೊನೆಯಲ್ಲಿ ಪ್ರಾರಂಭವಾಯಿತು, ದಕ್ಷಿಣ ಸಿರಿಯಾದ ಜಮ್ರಾಯಾದಲ್ಲಿನ ವೈಜ್ಞಾನಿಕ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ (CERS) ಭೂಮಿಯ ಮೇಲಿದ ಉಡಾಯಿಸುವ ರಾಕೆಟ್ ಎಂಜಿನ್ ಉತ್ಪಾದನಾ ಘಟಕದ ಮೇಲೆ ಹಿಂದಿನ ಇಸ್ರೇಲಿ ವೈಮಾನಿಕ ದಾಳಿಯ ನಂತರ ಈ ಘಟಕವನ್ನು ಪ್ರಾರಂಭಿಸಲಾಯಿತು. ಭವಿಷ್ಯದ ವಾಯುದಾಳಿಗಳಿಂದ ತನ್ನ ಕ್ಷಿಪಣಿ ಉತ್ಪಾದನಾ ಸಾಮರ್ಥ್ಯಗಳನ್ನು ಕಾಪಾಡಿಕೊಳ್ಳಲು ನೆಲದಡಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ. 2021 ರ ಹೊತ್ತಿಗೆ ಈ ಭೂಗತ ಘಟಕವನ್ನು 70 ರಿಂದ 130 ಮೀಟರ್‌ಗಳಷ್ಟು ಆಳದಲ್ಲಿ ಪರ್ವತದೊಳಗೆ ನಿರ್ಮಾಣ ಮಾಡಲಾಗಿತ್ತು.ಹಾರ್ಸ್‌ಶೂ-ಆಕಾರದ ಈ ಘಟಕವು ಮೂರು ಪ್ರಾಥಮಿಕ ಪ್ರವೇಶದ್ವಾರಗಳನ್ನು ಒಳಗೊಂಡಿತ್ತು: ಒಂದು ಕಚ್ಚಾ ವಸ್ತುಗಳಿಗೆ, ಇನ್ನೊಂದು ಪೂರ್ಣಗೊಂಡ ಕ್ಷಿಪಣಿಗಳಿಗೆ ಮತ್ತು ಮೂರನೆಯದು ಲಾಜಿಸ್ಟಿಕ್ಸ್ ಮತ್ತು ಕಚೇರಿ ಪ್ರವೇಶಕ್ಕಾಗಿ ನಿರ್ಮಾಣ ಮಾಡಲಾಗಿತ್ತು. ಹದಿನಾರು ಉತ್ಪಾದನಾ ಕೊಠಡಿಗಳಲ್ಲಿ ರಾಕೆಟ್ ಇಂಧನಕ್ಕಾಗಿ ಮಿಕ್ಸರ್‌ಗಳು, ಕ್ಷಿಪಣಿ ಬಾಡಿ ನಿರ್ಮಾಣ ಪ್ರದೇಶಗಳು ಇದ್ದವು. ಈ ಘಟಕದಲ್ಲಿ ವಾರ್ಷಿಕವಾಗಿ 100 ಮತ್ತು 300 ಕ್ಷಿಪಣಿಗಳ ಉತ್ಪಾದನೆ ಮಾಡುವ ಸಾಮರ್ಥ್ಯ ಹೊದಿತ್ತು ಎಂದು ಇಸ್ರೇಲಿ ಸೇನೆ (IDF) ಅಂದಾಜಿಸಿದೆ, ಇವು 300 ಕಿಲೋಮೀಟರ್ ದೂರದ ಟಾರ್ಗೆಟ್‌ಅನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದ್ದವು. ಇದು ಇಸ್ರೇಲಿ ಗಡಿಯಿಂದ ಉತ್ತರಕ್ಕೆ 200 ಕಿಮೀ ಮತ್ತು ಸಿರಿಯಾದ ಪಶ್ಚಿಮ ಕರಾವಳಿಯಿಂದ 45 ಕಿಮೀ ದೂರದಲ್ಲಿತ್ತು.
ಕಾರ್ಯಾಚರಣೆಗೆ ಪೂರ್ವಸಿದ್ಧತೆ
ವರ್ಷಗಳ ಮೇಲ್ವಿಚಾರಣೆ ಮತ್ತು ಗುಪ್ತಚರ ಮಾಹಿತಿಗಳ ನಂತರ ಈ ಘಟಕದ ಮೇಲೆ ದಾಳಿ ಮಾಡಲು ಐಡಿಎಫ್‌ನಿರ್ಧಾರ ಮಾಡಿತು. ದೀರ್ಘ-ಶ್ರೇಣಿಯ ನುಗ್ಗುವ ಕಾರ್ಯಾಚರಣೆಗಳಿಗೆ ಹೆಸರುವಾಸಿಯಾದ ಇಸ್ರೇಲಿ ಸೇನೆಯ ಪ್ರಮುಖ ಶಾಲ್ದಾಗ್ ಘಟಕ ಮತ್ತು ಯುನಿಟ್ 669 ಇವು ಯುದ್ಧ ಹುಡುಕಾಟ ಮತ್ತು ಪಾರುಗಾಣಿಕಾದಲ್ಲಿ ಪರಿಣತಿ ಹೊಂದಿದ್ದು, ಇವನ್ನು ಕಾರ್ಯಾಚರಣೆಗಾಗಿ ಮಿಷನ್‌ಗಾಗಿ. ಇವುಗಳಿಗೆ ಎರಡು ತಿಂಗಳ ತೀವ್ರ ತರಬೇತಿ ನೀಡಲಾಯಿತು.
ಕಾರ್ಯಾಚರಣೆಯ ದಿನಾಂಕವನ್ನು ಅದರ ಅನುಕೂಲಕರ ಹವಾಮಾನ ಪರಿಸ್ಥಿತಿಗಳಿಗೆ ತಕ್ಕಂತೆ ನಿರ್ಧರಿಸಲಾಯಿತು. ವ್ಯಾಪಕವಾದ ಗುಪ್ತಚರ ಮಾಹಿತಿಯು ಈ ಘಟಕದ ವಿನ್ಯಾಸವನ್ನು ಮ್ಯಾಪ್ ಮಾಡಿತು ಹಾಗೂ ಸಿರಿಯಾದ ವಾಯು ರಕ್ಷಣಾ ಸಾಮರ್ಥ್ಯಗಳನ್ನು ಅಂದಾಜಿಸಿತು.ಸುಮಾರು 100 ಶಾಲ್ದಾಗ್ ಕಮಾಂಡೋಗಳು ಮತ್ತು 20 ಯುನಿಟ್ 669 ಸಿಬ್ಬಂದಿ ಮೆಡಿಕ್ಸ್ ನಾಲ್ಕು CH-53 “ಯಸೂರ್” ಹೆವಿ ಟ್ರಾನ್ಸ್‌ಪೋರ್ಟ್ ಹೆಲಿಕಾಪ್ಟರ್‌ಗಳಲ್ಲಿ ಹತ್ತುವ ಮೂಲಕ ಕಾರ್ಯಾಚರಣೆ ಪ್ರಾರಂಭವಾಯಿತು. AH-64 ದಾಳಿ ಹೆಲಿಕಾಪ್ಟರ್‌ಗಳು, 21 ಫೈಟರ್ ಜೆಟ್‌ಗಳು, ಐದು ಡ್ರೋನ್‌ಗಳು ಮತ್ತು 14 ವಿಚಕ್ಷಣ ವಿಮಾನಗಳ ಬೆಂಗಾವಲುಪಡೆಯು ಇಸ್ರೇಲ್‌ನಿಂದ ಹೊರಟು, ಸಿರಿಯನ್ ರಾಡಾರ್ ಗೆ ಯಾವುದೇ ಮಾಹಿತಿ ಸಿಗದಂತೆ ಮಾಡಲು ಮೆಡಿಟರೇನಿಯನ್ ಸಮುದ್ರದ ಮೇಲೆ ಹಾರಿತು.
ಇವು ಸಿರಿಯಾದ ವಾಯುಪ್ರದೇಶವನ್ನು ತಲುಪಿದ ನಂತರ, ಹೆಲಿಕಾಪ್ಟರ್‌ಗಳು ಸಿರಿಯಾದ ಅತ್ಯಂತ ಸೂಕ್ಷ್ಮವಾದ ವಾಯು ರಕ್ಷಣಾ ವಲಯದಿಂದ ತಪ್ಪಿಸಿಕೊಳ್ಳಲು ಅತ್ಯಂತ ಕೆಳಕ್ಕೆ ಹಾರಿದವು. ಕಮಾಂಡೋಗಳ ಕಾರ್ಯಾಚರಣೆಯನ್ನು ಮರೆಮಾಚಲು ಇಸ್ರೇಲಿ ವಾಯು ಸೇನೆ ವಿಮಾನವು ಸಿರಿಯಾದ ಇತರ ಪ್ರದೇಶಗಳ ವಾಯು ದಾಳಿಗಳನ್ನು ನಡೆಸಿತು. ಆ ಮೂಲಕ ಸಿರಿಯಾದ ಸೇನೆಯ ದಿಕ್ಕು ತಪ್ಪಿಸಿತು.ಹೆಲಿಕಾಪ್ಟರ್‌ಗಳು ಭೂಗತವಾಗಿದ್ದ ಕ್ಷಿಪಣಿ ತಯಾರಿಕಾ ಘಟಕದ ಪ್ರವೇಶದ್ವಾರಗಳ ಬಳಿ ಲ್ಯಾಂಡ್‌ಆದವು. ಸೈನ್ಯವು ಮುನ್ನುಗ್ಗಿತು. ಯುನಿಟ್ 669 ಸಿಬ್ಬಂದಿ ವಿಮಾನದಲ್ಲಿ ಸ್ಟ್ಯಾಂಡ್‌ಬೈನಲ್ಲಿ ಉಳಿದರು, ಅಗತ್ಯವಿದ್ದಲ್ಲಿ ಗಾಯಾಳುಗಳನ್ನು ಸ್ಥಳಾಂತರಿಸಲು ಅಥವಾ ಚಿಕಿತ್ಸೆ ನೀಡಲು ಅವರು ಸಿದ್ಧರಾಗಿದ್ದರು. ಕಮಾಂಡೋಗಳು ಉಡಾವಣೆ ಮಾಡಿದ ಡ್ರೋನ್ ಆ ಪ್ರದೇಶವನ್ನು ಮೇಲ್ವಿಚಾರಣೆ ಮಾಡಿತು.
ಕಮಾಂಡೋಗಳು ಫೋರ್ಕ್‌ಲಿಫ್ಟ್‌ಗಳನ್ನು ಒಳಗೊಂಡಂತೆ ಆನ್-ಸೈಟ್ ಉಪಕರಣಗಳನ್ನು ಬಳಸಿಕೊಂಡು ಘಟಕದ ಹೆಚ್ಚು ಭದ್ರವಾದ ಪ್ರವೇಶದ್ವಾರಗಳನ್ನು ದಾಟಿ ಮುನ್ನುಗ್ಗಿದರು. ಈ ನಿರ್ದಿಷ್ಟ ಕಾರ್ಯಾಚರಣೆಗಾಗಿ ಕೆಲವು ಸೈನಿಕರು ಫೋರ್ಕ್ಲಿಫ್ಟ್ ತರಬೇತಿ ಸಹ ಪಡೆದಿದ್ದರು. ಒಳಗೆ, ತಂಡವು ಉತ್ಪಾದನಾ ಘಟಕದಲ್ಲಿ ಸುಮಾರು 660 ಪೌಂಡ್‌ಗಳಷ್ಟು ಸ್ಫೋಟಕಗಳನ್ನು ನೆಟ್ಟಿತು. ಹಾಗೂ ಪ್ಲಾನೆಟರಿ ಮಿಕ್ಸರ್‌ಗಳಂತಹ ನಿರ್ಣಾಯಕ ಯಂತ್ರಗಳನ್ನು ಟಾರ್ಗೆಟ್‌ಮಾಡಿತು. .
ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಎಂದು ಖಚಿತಪಡಿಸಿಕೊಂಡ ನಂತರ, ಸೇನಾ ತಂಡವು ಘಟಕದಿಂದ ಹೊರಬಂತು. ಮತ್ತು ಘಟಕದಲ್ಲಿ ಹುಗಿದಿಟ್ಟಿದ್ದ ಸ್ಫೋಟಕಗಳನ್ನು ದೂರದಿಂದಲೇ ಸ್ಫೋಟಿಸಿತು. ಒಂದು ಟನ್ ಸ್ಫೋಟಕಗಳಿಗೆ ಸಮಾನವಾದ ಸ್ಫೋಟವು “ಮಿನಿ ಭೂಕಂಪ”ವನ್ನು ಉಂಟುಮಾಡಿತು, ಸೈನಿಕರಿದ್ದ “ನೆಲವು ನಡುಗಿತು” ಎಂದು ವರದಿಯಾಗಿದೆ.
ಕಮಾಂಡೋಗಳು ಮೂರು ಗಂಟೆಗಳಲ್ಲಿ ತಮ್ಮ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದರು, ಅವರನ್ನು ಒಯ್ದ ಅದೇ ಹೆಲಿಕಾಪ್ಟರ್‌ಗಳಲ್ಲಿ ಅವರು ವಾಪಸ್ ಹೊರಟರು. ಕಾರ್ಯಾಚರಣೆಯ ಸಮಯದಲ್ಲಿ ಸರಿಸುಮಾರು 30 ಸಿರಿಯನ್ ಗಾರ್ಡ್‌ಗಳು ಮತ್ತು ಸೈನಿಕರು ಕೊಲ್ಲಲ್ಪಟ್ಟರು ಎಂದು IDF ವರದಿ ಮಾಡಿದೆ, ಆದರೆ ಸಿರಿಯನ್ ಮಾಧ್ಯಮವು 14 ಸೈನಿಕರು ಸಾವಿಗೀಡಾಗಿದ್ದಾರೆ ಮತ್ತು 43 ಸೈನಿಕರು ಗಾಯಗೊಂಡಿದ್ದಾರೆ ಎಂದು ಹೇಳಿದೆ.