ಹೊಸದಿಲ್ಲಿ: ”ರೈಲು ಪ್ರಯಾಣಿಕರಿಗೆ ನೀಡಲಾಗುವ ಹೊದಿಕೆಗಳನ್ನು ತಿಂಗಳಿಗೊಮ್ಮೆ ತೊಳೆಯಲಾಗುತ್ತಿದೆ ಮತ್ತು ಹಾಸಿಗೆಯ ಹೊದಿಕೆಯಾಗಿ ಅದರ ಬಳಕೆಗಾಗಿ ಹೆಚ್ಚುವರಿ ಬೆಡ್‌ಶೀಟ್ ಅನ್ನು ಬೆಡರೋಲ್ ಕಿಟ್‌ನಲ್ಲಿ ನೀಡಲಾಗುತ್ತದೆ” ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ.
ಮೂಲ ನೈರ್ಮಲ್ಯ ಮಾನದಂಡಗಳನ್ನು ಪೂರೈಸುವ ಹಾಸಿಗೆಗಳಿಗೆ ಪ್ರಯಾಣಿಕರು ಪಾವತಿಸುತ್ತಿದ್ದರೂ, ಉಣ್ಣೆಯ ಹೊದಿಕೆಗಳನ್ನು ತಿಂಗಳಿಗೊಮ್ಮೆ ಮಾತ್ರ ತೊಳೆಯಲಾಗುತ್ತದೆಯೇ ಎಂಬ ಕಾಂಗ್ರೆಸ್ ಸಂಸದ ಕುಲದೀಪ್ ಇಂದೋರಾ ಪ್ರಶ್ನೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಲೋಕಸಭೆಯಲ್ಲಿ ಉತ್ತರಿಸಿದ್ದಾರೆ.
ಪ್ರಸ್ತುತ ಭಾರತೀಯ ರೈಲ್ವೆಯಲ್ಲಿ ಬಳಸಲಾಗುವ ಕಂಬಳಿಗಳು ಹಗುರವಾಗಿದ್ದು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ನೀಡುತ್ತದೆ. ಜತೆಗೆ ಇದನ್ನು ಸುಲಭವಾಗಿ ತೊಳೆಯಬಹುದು. ಯಾಂತ್ರೀಕೃತ ಲಾಂಡ್ರಿ ವ್ಯವಸ್ಥೆ ಇದ್ದು, ಗುಣಮಟ್ಟದ ಯಂತ್ರಗಳ ಬಳಕೆ, ಬಟ್ಟೆ ತೊಳೆಯಲು ನಿರ್ದಿಷ್ಟ ರಾಸಾಯನಿಕಗಳ ಬಳಕೆ ಸೇರಿ ಪ್ರಯಾಣಿಕರ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ.
ಪ್ರಯಾಣಿಕರ ಅನುಕೂಲತೆಗೆ ಸಂಬಂಧಿಸಿ ಭಾರತೀಯ ರೈಲ್ವೆಯಲ್ಲಿ ಹಲವು ಸೌಲಭ್ಯಗಳಿವೆ. ತೊಳೆದ ಬಟ್ಟೆಗಳ ಗುಣಮಟ್ಟ ಪರಿಶೀಲಿಸಲು ವೈಟೋ-ಮೀಟರ್‌ಗಳನ್ನು ಬಳಸಲಾಗುತ್ತದೆ. ಬೆಡ್‌ರೋಲ್‌ಗಳನ್ನು ಪರಿಸರ ಸ್ನೇಹಿ ಪ್ಯಾಕೇಜಿಂಗ್ ಮಾಡಲಾಗುತ್ತದೆ. ಜತೆಗೆ ಸುಧಾರಿತ ಲಾಜಿಸ್ಟಿಕ್ ವ್ಯವಸ್ಥೆಯಲ್ಲಿ ಸಾಗಿಸಲಾಗುತ್ತದೆ. ಲಿನಿನ್/ಬೆಡ್‌ರೋಲ್‌ಗೆ ಸಂಬಂಧಿಸಿದ ದೂರುಗಳು ಹಾಗೂ ರೈಲ್‌ಮದಾದ್ ಆ್ಯಪ್‌ನಲ್ಲಿ ದಾಖಲಾಗಿರುವ ದೂರುಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ವಲಯ ಪ್ರಧಾನ ಕಛೇರಿ ಮತ್ತು ವಿಭಾಗೀಯ ಮಟ್ಟದಲ್ಲಿ ವಾರ್ ರೂಮ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ.