ಮಂಗಳೂರು : ನೇತ್ರಾವತಿ ನದಿ ನೀರಿನ ಹರಿವು ಏರಿಕೆ ಆಗುತ್ತಿದ್ದು, ಬಂಟ್ವಾಳದ ಮಣಿಹಳ್ಳದ ಕಡವಿನಬಾಗಿಲು ಬಳಿ ಏಳು ಮನೆಗಳು ಜಲಾವೃತಗೊಂಡಿದೆ. ನದಿ ನೆರೆ ನೀರಿನಿಂದ ಮನೆಗಳು ಮುಳುಗಿದೆ. ಅಪಾಯದ ಮಟ್ಟವನ್ನು ಮೀರಿ ನೇತ್ರಾವತಿ ನದಿ ಹರಿಯುತ್ತಿದ್ದು, ಮನೆಗಳು ಕುಸಿಯುವ ಭೀತಿ ಇದೆ. ಮನೆಯಂಗಳದಲ್ಲಿ ಎದೆ ಮಟ್ಟದಲ್ಲಿ ಹರಿಯುತ್ತಿದೆ. ಬಂಟ್ವಾಳದ ಹಲವು ಭಾಗಗಳಲ್ಲಿ ಭಾರೀ ನೆರೆ ಸೃಷ್ಟಿಯಾಗಿದೆ. ಶಂಭೂರು ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾಗುತ್ತಿದೆ. ಸ್ಥಳೀಯ ನಿವಾಸಗಳನ್ನು ಸ್ಥಳಾಂತರ ಮಾಡಲು ಜಿಲ್ಲಾಡಳಿತ ಸೂಚನೆ ನೀಡಿದೆ.

ಬೈಂದೂರಿನಲ್ಲಿ ಪ್ರತ್ಯಕ್ಷವಾದ ಬೃಹತ್ ಗಾತ್ರದ ಮೊಸಳೆ :
ಬೈಂದೂರು ತಾಲೂಕಿನ ನಾಗೂರು ಉಡುಪರ ಹಿತ್ತಲಿನಲ್ಲಿ ಬೃಹತ್‌ ಗಾತ್ರದ ಮೊಸಳೆ ಪತ್ತೆಯಾಗಿದೆ. ತೋಟದಲ್ಲಿ ಸಿಹಿ ನೀರಿನ ಬಾವಿಯಲ್ಲಿ ಮೊಸಳೆ ತೇಲಾಡುತ್ತಿತ್ತು. ಮೊಸಳೆ ನೋಡಿ ಹೌಹಾರಿದ ಸ್ಥಳೀಯರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿ ಮೊಸಳೆಗಳು ಕಾಣ ಸಿಗುವುದೇ ಅಪರೂಪ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ನಾಗೂರಿನ ರತ್ನಾಕರ ಉಡುಪ ಎನ್ನುವವರ ಬಾವಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಕೋಳಿ ಮಾಂಸ ಹಾಕಿ ಮೊಸಳೆ ಹಿಡಿಯುವ ಯತ್ನದಲ್ಲಿದ್ದಾರೆ. ಇತ್ತೀಚೆಗೆ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ಮೊಸಳೆ ತೇಲಿ ಬಂದಿರುವ ಶಂಕೆ ಇದೆ.