ನವದೆಹಲಿ: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ಭಾರೀ ಸಂಚಲನ ಮೂಡಿಸಿರುವ ಹೊತ್ತಲ್ಲೇ ದೊಡ್ಡ ಮಟ್ಟದ ಬೆಳವಣಿಗೆಗಳು ನಡೆಯುತ್ತಿವೆ. ಸಿದ್ದರಾಮಯ್ಯ ಬಣದ ನಾಯಕರ ಮೇಲೆಯೇ ಹನಿಟ್ರ್ಯಾಪ್ ನಡೆಯುತ್ತಿವೆ ಎನ್ನುವ ಚರ್ಚೆಗಳು ಜೋರಾಗಿವೆ. ಹಾಗಾಗಿ ಕೆಲವರು ಈ ಪ್ರಕರಣದ ಹಿಂದೆ ಡಿಕೆ ಶಿವಕುಮಾರ್ ಇದ್ದಾರಾ? ಎನ್ನುವ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಬಣದ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್‌ಗೆ ಬದ್ಧ ವೈರಿಯಂತಿರುವ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಡಿನ್ನರ್ ಮೀಟಿಂಗ್ ಮಾಡಿದ್ದಾರೆ.
ಹೌದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರು ನಿನ್ನೆ ದೆಹಲಿಯಲ್ಲಿ ಒಟ್ಟಿಗೆ ಡಿನ್ನರ್ ನಲ್ಲಿ ಭಾಗಿಯಾಗಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ದೆಹಲಿಯ ಹೆಚ್.ಡಿ.ಕುಮಾರಸ್ವಾಮಿ ಅವರ ನಿವಾಸದಲ್ಲಿ ಈ ಡಿನ್ನರ್ ಮೀಟಿಂಗ್ ಆಯೋಜಿಸಲಾಗಿದ್ದು, ಸಧ್ಯ ದೆಹಲಿಗೆ ತೆರಳಿರುವ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಮನೆಗೆ ಆಹ್ವಾನಿಸಿದ್ದಾರೆ ಎಂದು ಹೇಳಲಾಗಿದೆ. ಸಾಹುಕಾರ್ ಹಾಗೂ ದಳಪತಿಗಳ ಈ ನಡೆ ಭಾರೀ ಕುತೂಹಲ ಮೂಡಿಸಿದೆ.