ಸಂಕೇಶ್ವರ : ಪಟ್ಟಣದಲ್ಲಿನ ಶ್ರೀ ದುರದುಂಡಿಶ್ವರ ಖಾಸಗಿ ತರಕಾರಿ ಮಾರುಕಟ್ಟೆಯಲ್ಲಿ ರೈತರಿಂದ ಲೂಟಿ ಮಾಡಿ, ರೈತರ ಮೇಲೆ ಹಲ್ಲೆ ನಡೆಸುತ್ತಿರುವ ದಲ್ಲಾಳಿಗಳಿಗೆ ಕಡಿವಾಣ ಹಾಕಿ ಇಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಸಮೀಪದ ಎಪಿಎಮ್ ಸಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಸಾವಿರಾರು ಅನ್ನದಾತರು ಗುರುವಾರ ಸಂಕೇಶ್ವರ ಪಟ್ಟಣದಲ್ಲಿ ತಮ್ಮ ಚಕ್ಕಡಿ ಗಾಡಿ ಹಾಗೂ ಟ್ರ್ಯಾಕ್ಟರ್ ಗಳ ಮೂಲಕ ಪ್ರತಿಭಟನಾ ಮೆರವಣಿಗೆ ಮೂಲಕ ಲಗ್ಗೆ ಇಟ್ಟರು.
ಗುರುವಾರ ಬೆಳಿಗ್ಗೆ ಹುಕ್ಕೇರಿ ಯಿಂದ ಸಂಕೇಶ್ವರ ಪಟ್ಟಣದ ವರೆಗೆ ಪ್ರತಿಭಟನಾ ರ್ಯಾಲಿಯೊಂದಿಗೆ ಪಾದಯಾತ್ರೆ ಮೂಲಕ ಸಂಕೇಶ್ವರಕ್ಕೆ ಆಗಮಿಸಿದ ಸಾವಿರಾರು ರೈತರು ಸಂಕೇಶ್ವರದ ಚನ್ನಮ್ಮ ವೃತ್ತಕ್ಕೆ ಆಗಮಿಸಿ ಚನ್ನಮ್ಮ ವೃತ, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಶ್ರೀ ದುರುದುಂಡಿಶ್ವರ ಖಾಸಗಿ ತರಕಾರಿ ಮಾರುಕಟ್ಟೆ ಎದುರು ಕೆಲಹೊತ್ತು ರಸ್ತೆ ತಡೆದು ಪ್ರತಿಭಟನೆ ಮಾಡಿದರು. ಬಳಿಕ ಪಟ್ಟಣದ ಎಪಿಎಮ್ ಸಿ ಆವರಣದಲ್ಲಿ ಸಭೆ ನಡೆಸಿದರು.
ರೈತರಿಂದ ವರ್ಷಕ್ಕೆ 11 ಕೋಟಿ ಲೂಟಿ : ಚೂನಪ್ಪ ಪೂಜೇರಿ
ಶ್ರೀ ದುರದುಂಡಿಶ್ವರ ಖಾಸಗಿ ತರಕಾರಿ ಮಾರುಕಟ್ಟೆಯಲ್ಲಿ ಇರುವ ಏಜೆಂಟರಿಂದ ವರ್ಷಕ್ಕೆ ಸುಮಾರು 11 ಕೋಟಿ ರೂ. ಗಳಷ್ಟು ರೈತರಿಂದ ಲೂಟಿ ನಡೆಯುತ್ತಿದ್ದು, ಅದರಲ್ಲಿ ಒರ್ಷಕ್ಕೆ ಕೇವಲ 13 ಲಕ್ಷ ರೂ ನಿಡಸೋಶಿಯ ದುರದುಂಡಿಶ್ವರ ಮಠಕ್ಕೆ ನೀಡಲಾಗುತ್ತದೆ ಎಂದರು.
ಈ ಮಾರುಕಟ್ಟೆಯಲ್ಲಿ ಕಳೆದ 25 ವರ್ಷಗಳಿಂದ ಸುಮಾರು 300 ಕೋಟಿ ರೂ ಲೂಟಿ ಮಾಡಲಾಗಿದೆ. ಖಾಸಗಿ ದಲ್ಲಾಳಿಗಳ ಹಿಡಿತದಲ್ಲಿ ಸಿಕ್ಕು ರೈತರು ನರಳುವಂತಾಗಿದೆ. ಈ ಹಿನ್ನೆಲೆಯಲ್ಲಿ ಈ ಖಾಸಗಿ ತರಕಾರಿ ಮಾರುಕಟ್ಟೆ ಸರಕಾರಿ ಎಪಿಎಮ್ ಸಿ ಗೆ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದರು.