ಬೆಳಗಾವಿ: ತವರು ಮನೆಯಿಂದ ಬಂಗಾರ ಹಾಗೂ ನಗದು ತರಲು ಒಪ್ಪದ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ₹20 ಸಾವಿರ ದಂಡ ಮತ್ತು 10 ವರ್ಷ ಜೈಲು ಶಿಕ್ಷೆ ವಿಧಿಸಿ ಬೆಳಗಾವಿಯ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ.ಎಚ್.ಎಸ್.ಮಂಜುನಾಥ ತೀರ್ಪು ಪ್ರಕಟಿಸಿದ್ದಾರೆ. ಕುಲಗೋಡ ಠಾಣೆ ವ್ಯಾಪ್ತಿಯ ಬಿಸನಕೊಪ್ಪ ಗ್ರಾಮದ ರಮೇಶ ಬಸಪ್ಪ ಹೊಂಗಲ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತನ ಪತ್ನಿ ಶ್ರೀದೇವಿ ರಮೇಶ ಹೊಂಗಲ ಹತ್ಯೆಯಾದವಳು. 2014 ಮೇ 19 ರಂದು ವಿವಾಹವಾಗಿದ್ದ ಇವರಿಗೆ 14 ತಿಂಗಳ ಗಂಡು ಮಗು ವಿದೆ. ಪತಿ ರಮೇಶ ಹೊಂಗಲ ಮದ್ಯ ಸೇವನೆ ಚಟ ಹೊಂದಿದ್ದ. ಇದರಿಂದ ಪತ್ನಿ ಶ್ರೀದೇವಿಗೆ ತವರು ಮನೆಯಿಂದ ಹಣ ಮತ್ತು ಬಂಗಾರವನ್ನು ವರದಕ್ಷಿಣೆ ತೆಗೆದುಕೊಂಡು ಬರುವಂತೆ ಕಿರುಕುಳ ನೀಡುತ್ತಿದ್ದ. ಈ ವಿಷಯವನ್ನು ಶ್ರೀದೇವಿ ತಮ್ಮ ಕುಟುಂಬಸ್ಥರಿಗೆ ತಿಳಿಸಿ ದ್ದರಿಂದ ತವರು ಮನೆಯವರು ಹಲವು ಬಾರಿ ಬುದ್ದಿ ವಾದ ಹೇಳಿದ್ದರು. 2021 ಜ.12 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಪರಾಧಿ ರಮೇಶ, ಖರ್ಚಿಗೆ ಹಣ ಇಲ್ಲ. ತವರು ಮನೆಯಿಂದ ಹಣ ಹಾಗೂ ಬಂಗಾರ ತೆಗೆದುಕೊಂಡು ಬರುವಂತೆ ಪೀಡಿಸಿದ್ದಾನೆ. ಇದಕ್ಕೆ ಪತ್ನಿ ಶ್ರೀದೇವಿ ಒಪ್ಪದ್ದರಿಂದ ಆಕ್ರೋಶಗೊಂಡು ಕೊಲೆ ಮಾಡುವ ಉದ್ದೇಶದಿಂದ ಸೀರೆಯಿಂದ ಅವಳ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಕುಲಗೋಡ ಠಾಣೆ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಷ ಪಟ್ಟಿ ಸಲ್ಲಿಕೆ ಮಾಡಿದ್ದರು. ವಿಚಾರಣೆ ನಡೆಸಿದ ಬೆಳಗಾವಿ ಯ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ.ಎಚ್.ಎಸ್.ಮಂಜುನಾಥ ಅವರು, ಅಪರಾಧಿಗೆ 10 ವರ್ಷ ಸಾದಾ ಜೈಲು ಶಿಕ್ಷೆ ಮತ್ತು ₹20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಸರೀನ ಬಂಕಾಪೂರ ವಕಾಲತ್ತು ವಹಿಸಿದ್ದರು.