ನವದೆಹಲಿ: ಭಾರತದಲ್ಲಿ ಮೊದಲ ಪರಿಸರ ಸ್ನೇಹಿ ಹೈಡೋಜನ್ ಚಾಲಿತ ರೈಲು ಶೀಘ್ರದಲ್ಲೇ ಓಡುವ ಸಾಧ್ಯತೆ ಇದೆ. ಜರ್ಮನಿಯ ಟಿಯುವಿ-ಎಸ್ ಯುಡಿ ಕಂಪನಿ ಮೂಲಕ ರೈಲಿನ ಆಡಿಟ್ ನಡೆಸಲು ರೈಲ್ವೆ ನಿರ್ಧರಿಸಿದ್ದು, ಡಿಸೆಂಬರ್‌ನಲ್ಲಿ ಪ್ರಾಯೋಗಿಕ ಸಂಚಾರಕ್ಕೆ ಮುಂದಾಗಿದೆ.

ಇದರೊಂದಿಗೆ ಹೈಡೋಜನ್ ಚಾಲಿತ ರೈಲು ಹೊಂದಿರುವ ವಿಶ್ವದ 5 ನೇ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಗಲಿದೆ. ಈಗಾಗಲೇ ಜರ್ಮನಿ, ಫ್ರಾನ್ಸ್, ಸ್ವೀಡನ್ ಹಾಗೂ ಚೀನಾದಲ್ಲಿ ಈ ರೈಲುಗಳು ಓಡುತ್ತಿವೆ.

ಪ್ರಾಯೋಗಿಕ ಪರೀಕ್ಷೆ ಹರ್ಯಾಣದ ಜಿಂದ್ -ಸೋನಿಪತ್ ಮಾರ್ಗದಲ್ಲಿ ನಡೆವ ಸಾಧ್ಯತೆ ಇದೆ. ರೈಲಿನ ಮೂಲ ಮಾದರಿ (ಪ್ರೋಟೋಟೈಪ್) ಚೆನ್ನೈ ಕೋಚ್ ಫ್ಯಾಕ್ಟರಿಯಲ್ಲಿ ಸಿದ್ದವಾಗಲಿದೆ ಎಂದು
ಅಧಿಕಾರಿಗಳು ಹೇಳಿದ್ದಾರೆ.

1 ರೈಲಿಗೆ 80 ಕೋಟಿ ರು.: ರೈಲ್ವೆ ಇಲಾಖೆ ಇಂಥ 35 ರೈಲುಗಳನ್ನು ಓಡಿಸಲು ಯೋಚಿಸುತ್ತಿದೆ. ಪಾರಂಪರಿಕ ಮಾರ್ಗಗಳಲ್ಲಿ ಜಾರಿ ಗೊಳಿಸಲಾಗುವುದು. ಒಂದು ರೈಲಿಗೆ ಸುಮಾರು 80 ಕೋಟಿ ರು. ವೆಚ್ಚ ಆಗಲಿದೆ. ಇನ್ನು ಇದಕ್ಕೆ ಬೇಕಾದ ಮೂಲಸೌಕರ್ಯಕ್ಕೆ ಪ್ರತಿ ಮಾರ್ಗಕ್ಕೆ 70 ಕೋಟಿ ರು. ಬೇಕಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೊದಲ ರೈಲು ಓಡುವ ಜಿಂದ್‌ನಲ್ಲಿನ ಇಂಧನ ತುಂಬುವ ಘಟಕ ಸ್ಥಾಪಿಸಲಾಗುತ್ತದೆ. ಇದು 3 ಟನ್ ಕೇಜಿ ಹೈಡೋಜನ್ ಸಂಗ್ರಹಣೆ, ಸಂಕೋಚಕ (ಕಂಪ್ರೆಸ್ಸರ್) ಮತ್ತು 2 ಡಿಸ್ಪೆನ್ಸರ್‌ಗಳನ್ನು ಹೊಂದಿರು ತ್ತದೆ, ಇವು ತ್ವರಿತವಾಗಿ ಇಂಧನ ತುಂಬಲು ಅನುವು ಮಾಡಿಕೊಡುತ್ತದೆ ಎಂದು ರೈಲ್ವೆ ಹೇಳಿಕೆ ತಿಳಿಸಿದೆ.