
ಬೆಳಗಾವಿ: 2028ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಮುಖ್ಯಮಂತ್ರಿ ಹುದ್ದೆಗೆ ಕ್ಲೇಮ್ ಮಾಡ್ತೀನಿ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪಕ್ಷವನ್ನು ಅಧಿಕಾರಕ್ಕೆ ತರುವುದು ಎಲ್ಲರ ಜವಾಬ್ದಾರಿ. ನಾನು 2028ಕ್ಕೆ ಸಿಎಂ ಅಭ್ಯರ್ಥಿ ಅಂತಾ ಹೇಳಿದ್ದೇವೆ. ಆಗ್ತೀವಿ ಅಂತಾ ಹೇಳಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಹುಕ್ಕೇರಿ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಮಾಡೋದು ಬಿಡೋದು ಹೈಕಮಾಂಡ್‌ಗೆ ಬಿಟ್ಟಂತಹ ವಿಚಾರ. ಸರ್ಕಾರ ತರಲು ಎಲ್ಲರ ಪಾತ್ರ ಇದ್ದೇ ಇದೆ. ಅದರಲ್ಲಿ ನಾನೂ ಪಾಲುದಾರ, ಭಾಗಿದಾರ ಅಷ್ಟೇ’ಎಂದರು.
ಡಿಕೆಶಿ ಜೊತೆ ಮುನಿಸಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಯಾವುದೇ ಮುನಿಸಿಲ್ಲ, ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಮೊನ್ನೆ ಎಲ್ಲರೂ ಸೇರಿ ಅತ್ಯಂತ ಯಶಸ್ವಿ ಕಾರ್ಯಕ್ರಮ ಮಾಡಿದ್ದೇವೆ. ಮುನಿಸು ಅನ್ನುವ ಪ್ರಶ್ನೆ ಬರಲ್ಲ, ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.
ಇನ್ನು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ಪ್ರಶ್ನೆ ಮಾಡಬೇಕು. ಆ ಬಗ್ಗೆ ಹೇಳುವ ಅಧಿಕಾರ ನನಗೆ ಇಲ್ಲ ಎಂದರು.
ಬಿಜೆಪಿ ನಾಯಕ ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಬರ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರುವ ಎಲ್ಲರಿಗೂ ಸ್ವಾಗತ. ಖಾಸಗಿಯಾಗಿ ಶ್ರೀರಾಮುಲು ನನ್ನ ಸಂಪರ್ಕ ಇದ್ದಾರೆ, ರಾಜಕೀಯವಾಗಿ ಇಲ್ಲ. ಪಕ್ಷಕ್ಕೆ ಬರುವುದು ಬಿಡುವುದು ಅವರವರಿಷ್ಟ. ನಾವು ಕರೆದರೆ ಯಾರೂ ಬರಲ್ಲ, ಅವರೇ ಬರಬೇಕಾಗುತ್ತದೆ. ಶ್ರೀರಾಮುಲುರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಪ್ರಯತ್ನದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಿನ್ನೆಯೂ ಈ ಬಗ್ಗೆ ಹೇಳಿದ್ದೇನೆ ಈ ಬಗ್ಗೆ ಯಾವುದೇ ಗಮನಕ್ಕಿಲ್ಲ ಎಂದು ಹೇಳಿದರು.
ಶ್ರೀರಾಮುಲುರನ್ನು ಪಕ್ಷಕ್ಕೆ ಕರೆತರಲು ಡಿಕೆಶಿ ಪ್ರಯತ್ನಿಸುತ್ತಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅವನು ಮಾಡಿದರೆ ನಮಗೆ ಗೊತ್ತಿಲ್ಲ. ಬೆಂಗಳೂರಿಗೆ ಹೋದ ಮೇಲೆ ಅದರ ಮಾಹಿತಿ ಪಡೆಯುತ್ತೇನೆ. ನಂತರ ಆ ಬಗ್ಗೆ ಹೆಚ್ಚಿಗೆ ಹೇಳುವಂತಹ ಪ್ರಯತ್ನ ಮಾಡುತ್ತೇನೆ ಎಂದರು.