ಸಾಂಪ್ರದಾಯಿಕ ಬೆಲ್ಲ ತಯಾರಿಕೆಯಲ್ಲಿ ಗಾಣಗಳ ಪಾತ್ರ ಬಹು ಮುಖ್ಯ.ಮೊದಮೊದಲು ಕಬ್ಬನ್ನು ಜಜ್ಜಿ ರಸ ಹಿಂಡಲಾಗುತ್ತಿತ್ತು. ಅದರ ಜೊತೆಜೊತೆಗೇ ಇನ್ನೊಂದು ವಿಧಾನವಾಗಿ ರಂದ್ರವಿರುವ ಒರಳಿನಲ್ಲಿ ಕಬ್ಬಿನ ತುಂಡುಗಳನ್ನು ಹಾಕಿ ಒನಕೆಯಿಂದ ಕುಟ್ಟಿ ಅದರ ರಸ ತೆಗೆಯಲಾಗುತ್ತಿತ್ತು. ಆ ಮೂಲಕ ಬೆಲ್ಲ ಮಾಡಲಾಗುತ್ತಿತ್ತು. ಬರಬರುತ್ತಾ ಗಾಣಗಳು ‘ಆಲೇಮನೆ’ ಎಂಬ ಬೆಲ್ಲ ಉತ್ಪಾದಕ ಘಟಕ ಸೃಷ್ಠಿಸಿದ್ದವು. ಅವುಗಳಲ್ಲಿ ಪ್ರಮುಖವಾಗಿ ಹಿಂದಿನ ಕಾಲದಲ್ಲಿ ಇದ್ದಂತಹ “ಮರದ ಗಾಣಗಳು”

ಆಧುನಿಕತೆ ಬೆಳೆದಂತೆ ಗಾಣಗಳು ತರೇವಾರಿ ರೂಪ ಪಡೆದುಕೊಂಡಿವೆ ನಿಜ. ಆದರೆ ನಾನು ಕಂಡ ಗಾಣ ಬಹು ವಿಶೇಷವಾಗಿದ್ದವು.  ಅಂದರೆ ಅವು ದೊಡ್ಡ ಗಾತ್ರದ ಮರದ ಗಾಣಗಳು.
ಹೌದು ಇದು ಎಲ್ಲಿಯೋ ನೋಡಿದ ಗಾಣಗಳಲ್ಲ, ಬದಲಾಗಿ ನಮ್ಮ ಮನೆಯಲ್ಲಿ ಇದ್ದ ಹೆಚ್ಚುಕಡಿಮೆ ಆರುನೂರು ವರ್ಷ ಹಳೆಯ ಗಾಣಗಳಾಗಿದ್ದವು. ಗಂಡು ಗಾಣ ಎಂದು ಕರೆಯಲ್ಪಡುವ ಗಾಣವು ನಾಲ್ಕರಿಂದ ಐದು ಅಡಿ ಎತ್ತರವಿತ್ತು. ಹೆಣ್ಣು ಗಾಣವು ನಾಲ್ಕಡಿ ಅಂದಾಜು ಇತ್ತು. ಅಲ್ಲಟೆ ಗಾಣ (ಚಿಕ್ಕಗಾಣ) ನಾನು ನೋಡುವಾಗ ಅದು ಸಂಪೂರ್ಣ ಗೆದ್ದಲು ಹಿಡಿದು ನಾಶವಾಗಿತ್ತು. ಇಪ್ಪತ್ತನೇ ಶತಮಾನದ ಆರಂಭದ ವೇಳೆಗೆ ಉಕ್ಕಿನ ಗಾಣಗಳು ಬಂದವು. ತರುವಾಯ ಮರದ ಗಾಣಗಳು ಸಂಪೂರ್ಣವಾಗಿ ತಮ್ಮ ಅಸ್ಥಿತ್ವ ಕಳೆದುಕೊಂಡವು.

ಕಾರಣ ಸುಲಭದ ನಿರ್ವಹಣೆ, ತಯಾರಿಸುವಿಕೆ, ಸುಲಭ ತಿರುಗುವಿಕೆ ಹೀಗೆ ಹತ್ತಾರು ವಿಧದ ಉಪಯೋಗದಿಂದ ಉಕ್ಕಿನ ಗಾಣಗಳು ಹೆಚ್ಚು ಪ್ರಚಾರಗೊಂಡವು. ಪರಿಣಾಮ ನಾಲ್ಕಾರು ಶತಮಾನಗಳ ಕಾಲ ಆಲೆಮನೆಯ ಪಾರುಪತ್ಯ ಮೆರೆದಿದ್ದ ಮರದ ಗಾಣಗಳು ಮೂಲೆಗುಂಪಾದವು.
ಅಂದಿನ‌ಕಾಲದಲ್ಲಿ ಪ್ರತಿಷ್ಠಿತ ಮನೆಗಳಲ್ಲಿ ಮಾತ್ರ ಇಂತಹ ಗಾಣಗಳು ಇರುತ್ತಿದ್ದವು. ಹಾಗೆಂದ ಮಾತ್ರಕ್ಕೆ ಬಹಳಷ್ಟು ಇದ್ದ ಉದಾಹರಣೆಗಳು ಕಾಣುವುದಿಲ್ಲ. ಸುತ್ತಮುತ್ತಲಿನ ಊರುಗಳಲ್ಲಿ ಕಾನೂರು ಬಿಟ್ಟರೆ ಮರದ ಗಾಣ ಇದ್ದಿದ್ದು ಅಂದಿನ‌ಕಾಲದಲ್ಲಿ ಅದು ನಮ್ಮನೆ ಅಂದರೆ ಗುಚ್ಚಕ್ಕಿ ಮನೆಯಲ್ಲಿ ಮಾತ್ರ.

ನಮ್ಮ‌ ಮನೆಯಲ್ಲಿದ್ದ ಗಾಣಗಳು ಸರಿಸುಮಾರು 1955 ರವರೆಗೂ ಕಾರ್ಯನಿರ್ವಹಿಸುತ್ತಿದ್ದವು.
ನಮ್ಮ ದೊಡ್ಡಪ್ಪ ಪುಟ್ಟಯ್ಯರ (ಲೋಕರಾಜ) ಮದುವೆಯ ನಂತರವೂ ಬೆಲ್ಲ ತಯಾರಿಕೆಯಲ್ಲಿ ಚಾಲ್ತಿಯಲ್ಲಿದ್ದವು. ಸ್ವತಃ ದೊಡ್ಡಪ್ಪನೇ ಗಾಣದಿಂದ ಬೆಲ್ಲ ತಯಾರಿಸಿದ ಕುರಿತು ದೊಡ್ಡಮ್ಮ‌ ಹೇಳುತ್ತಾರೆ. 400 ಕ್ಕೂ ಹೆಚ್ಚು ಗಡಿಗೆ ಬೆಲ್ಲ ತಯಾರಿಸಿದ್ದುದು ಇತಿಹಾಸ.

ಸಾಮಾನ್ಯವಾಗಿ ಬಲಿಷ್ಠವಾದ ಕೋಣಗಳು ಮಾತ್ರವೇ ಈ ಗಾಣಗಳನ್ನು ತಿರುಗಿಸುತ್ತಿದ್ದವು. ಕಾರಣ ಈಗಿನ ಗಾಣಗಳಂತೆ ಸುಲಭವಾಗಿ ತಿರುಗುತ್ತಿರಲಿಲ್ಲ.
ಹಾಗಾಗಿ ಆಲೆಮನೆಗಾಗಿಯೇ ಬಲಿಷ್ಠ ಕೋಣಗಳನ್ನು ಸಾಕುವ ರೂಡಿ (ಪ್ರತಿಷ್ಠೆ) ಅಂದಿನ‌ಕಾಲದಲ್ಲಿ ಬೆಳೆದಿತ್ತು. ನಮ್ಮ‌ ಮನೆಯಲ್ಲಿ ಆಲೇಕೋಣನ ಕೊಟ್ಟಿಗೆ ಎಂದೇ ಕರೆಯುವ ಕೊಟ್ಟಿಗೆಯೊಂದಿತ್ತು.
ಅಂದರೆ ಆಲೆಗಾಣಗಳನ್ನು ಎಳೆಯಲು ಕೋಣಗಳಿಗೆ ಬಹಳ ದೊಡ್ಡ ಪ್ರಮಾಣದ ಶಕ್ತಿ ಅಗತ್ಯವಿತ್ತು. ಅವುಗಳಿಗೆ ಈ ಕೊಟ್ಟಿಗೆಯಲ್ಲಿ ವಿಶೇಷವಾಗಿ ನೋಡಿಕೊಳ್ಳಲಾಗುತ್ತಿತ್ತು.

ಸಾಮಾನ್ಯವಾಗಿ ಆಲೆಮನೆ ಕಟ್ಟಿದರೆ, ಮರದ ಗಾಣಗಳಿಂದ ಜೀಂಂಕ್ ಎನ್ನುವ ಶಬ್ದ ನಿರರ್ಗಳವಾಗಿ ಹೊರಹೊಮ್ಮುತ್ತಿತ್ತು. ಈ ಶಬ್ದವು ಮೈಲುಗಟ್ಟಲೇ ಕೇಳುತ್ತಿತ್ತು.

ಈ ಗಾಣಗಳನ್ನು ಎಲ್ಲಾ ಮರಗಳಿಂದ ತಯಾರಿಸುವಂತಿಲ್ಲ.
ಅದಕ್ಕೆ ಕೆಲವು ಮರಗಳು ಮಾತ್ರ ಗ್ರಾಹ್ಯವಾಗುತ್ತಿದ್ದವು. ನಮ್ಮನೆಯ ಗಾಣಗಳು ಹಲಸಿನ ಮರದ ಗಾಣಗಳಾಗಿದ್ದವು. ಬಹುತೇಕ ಹಲಸಿನ ಮರದ ಗಾಣಗಳೇ ಹೆಚ್ಚಾಗಿ ಮಾಡಲಾಗುತ್ತಿತ್ತು.
ಇನ್ನುಳಿದಂತೆ ಡೂಮನ ಮರದ ಗಾಣಗಳೂ ಇದ್ದವೆಂದು ಕೇಳಿರುವೆ.
ಸಾಮಾನ್ಯವಾಗಿ ಬೀಸುಮಾರು (ಗಾಣ ಸುತ್ತಲು ಬಳಸುವ ಮರ) ಡೂಮನ ಮರದಲ್ಲಿಯೇ ತಯಾರಿಸಲಾಗುತ್ತಿತ್ತು.
ಕಾರಣ ಈ ಮರಗಳು ಗಟ್ಟಿಯೊಂದಿಗೆ ನಾರಿನ ಅಂಶಗಳೂ ಹೆಚ್ಚು, ಬಾಳಿಕೆಯೂ ಹೆಚ್ಚು.
ಆಲೆಮನೆ ತರುವಾಯ ಗಾಣಗಳನ್ನು ವಾರಗಟ್ಟಲೇ ನೀರಲ್ಲಿ‌ ನೆನಸಲಾಗುತ್ತಿತ್ತು. ಕಾರಣ ಸಿಹಿ ಅಂಶ ಗಾಣದಲ್ಲಿ ಇರಕೂಡದೆಂಬ ಕಾರಣಕ್ಕೆ.
ತದನಂತರ ನೆರಳಿನಲ್ಲಿ ಒಣಗಿಸಿ ಅದನ್ನು ಜೋಪಾನವಾಗಿ ಬೆಂಕಿ ಹೊಗೆಯಾಡುವ ಜಾಗದಲ್ಲಿ ಇರಿಸಲಾಗುತ್ತಿತ್ತು.
ಹೀಗೆ ಶತಮಾನಗಳ ಕಾಲ ಜೋಪಾನವಾಗಿರಿಸಿದ್ದ ಗಾಣಗಳು ಕಾಲ ಕಳೆದಂತೆ ಮೌಲ್ಯ ಕಳೆದುಕೊಂಡು ಮೂಲೆಗುಂಪಾದವು.
ಆಲೆಮನೆಯ ದಳ್ಯ ಹಾಗು ಕಡಾಯಿಗಳು ಗುಜರಿಯವರ ಪಾಲಾದರೆ, ಗಾಣಗಳು ಕಾಲಾನಂತರ ಸುಡುಮಣ್ಣಿನ ರಾಶಿ ಸೇರಿದವು. ಕೆಲವು ಹೋಮದ ಚಕ್ಕೆಯಾದವು, ಉಳಿದವು ಕಟ್ಟಿಗೆಯ ಗೂಡು ಸೇರಿದವು.

ಹೀಗೆ ನಾನು ಚಿಕ್ಕವನಿದ್ದಾಗ ಸುಡುಮಣ್ಣಿನ ರಾಶಿ ಸೇರಿದ್ದ ಗಾಣಗಳು ಇಂದೇಕೋ ನೆನಪಾದವು.
ಕಾಲದ ಮಹಿಮೆನೆ ಹಾಗೇನೋ???? ಕಳೆದು ಹೋದ ವಸ್ತುಗಳ ಕುರಿತು ಮರುಚಿಂತಿಸುವಂತೆ ಮಾಡುವುದು!!!
ನಮ್ಮನೆಯ ಗಾಣಗಳು ಗೇರುಸೊಪ್ಪ ಅರಸರ ಕಾಲದಲ್ಲಿ ಸೃಷ್ಠಿಯಾದ ಗಾಣಗಳು. ನಮ್ಮನೆಯಲ್ಲಿದ್ದ ಈ ಗಾಣಗಳೂ ಸಹ ಗೇರುಸೊಪ್ಪದ ಸಾಳ್ವ ವಂಶದವರ ಕೊಡುಗೆ ಎನ್ನುವುದರಲ್ಲಿ ಮರು ಮಾತಿಲ್ಲ.

✒️ಲೋಕರಾಜ(ಸಾಳ್ವಕುಲಜ ನಗಿರೆಸುತ)