Join The Telegram | Join The WhatsApp |
ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ. ವೀರರಾಣಿಯರಾದ ಬೆಳವಡಿ ಮಲ್ಲಮ್ಮ ಹಾಗೂ ರಾಣಿ ಚನ್ನಮ್ಮರು ಬಾಳಿ ಬೆಳಗಿದ ಅಪೂರ್ವ ಜಿಲ್ಲೆ ಬೆಳಗಾವಿ. ಆಧುನಿಕವಾಗಿಯೂ ಬೆಳಗಾವಿ ಜಿಲ್ಲೆಯ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಪುರುಷರಿಗೆ ತಾವೇನು ಕಡಿಮೆ ಇಲ್ಲ ಎನ್ನುವಂತೆ ಸಾಧನೆಯ ಹಾದಿಯಲ್ಲಿ ಮುನ್ನುಗುತ್ತಿರುವುದು ವಿಶೇಷವಾಗಿ ಗಮನಿಸಬಹುದು.
ಪತಿಯ ಹಾದಿಯಲ್ಲಿ ಮಂಗಲಾ :
ಬೆಳಗಾವಿಯ ಜನಪ್ರಿಯ ಸಂಸದೆ ಆಗಿರುವ ಮಂಗಲಾ ಅಂಗಡಿ ಅವರು ಪತಿ ದಿ. ಸುರೇಶ ಅಂಗಡಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆಗೆ ರೈಲ್ವೆ, ಶಿಕ್ಷಣ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ದೊಡ್ಡ ದೊಡ್ಡ ಯೋಜನೆಗಳನ್ನು ತರುವ ಕನಸು ಕಂಡಿರುವ ಮಂಗಲಾ ಅಂಗಡಿ ಅವರು ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿ ಹಲವು ಯೋಜನೆಗಳನ್ನು ಬೆಳಗಾವಿಗೆ ತರುವಲ್ಲಿ ಶ್ರಮಿಸುತ್ತಿರುವುದು ಗಮನಿಸತಕ್ಕ ಸಂಗತಿ.
ಛಲದಂಕ ಮಲ್ಲೆ ಜೊಲ್ಲೆ :
ರಾಜ್ಯದ ಮುಜರಾಯಿ ಖಾತೆ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿರುವ ಶಶಿಕಲಾ ಜೊಲ್ಲೆ ಅವರು ನಿಪ್ಪಾಣಿಯ ಜನಪ್ರಿಯ ಶಾಸಕಿ. ನಿಪ್ಪಾಣಿಯಲ್ಲಿ ಕಮಲ ಧ್ವಜ ಹಾರಿಸುವ ಮೂಲಕ ಬಿಜೆಪಿಗೆ ಅಪೂರ್ವ ಶಕ್ತಿ ತಂದು ಕೊಟ್ಟಿರುವ ಛಲದಂಕ ಮಲ್ಲೆ ಶಶಿಕಲಾ ಜೊಲ್ಲೆ ಸಚಿವೆಯಾಗಿ ಬಹುದೊಡ್ಡ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಕೈ ಶಕ್ತಿ :
ಜಿಲ್ಲಾ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ನಿಭಾಯಿಸಿರುವ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿಯಾಗಿ ತಮ್ಮ ಸೇವಾ ಕಾರ್ಯದಿಂದ ಪರಿಚಿತರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕಿಯಾಗಿ ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿದ್ದಾರೆ.
ವೈದ್ಯೆ ಈಗ ಜನ ಸೇವಕಿ :
ಖಾನಾಪುರದ ಜನಪ್ರಿಯ ಶಾಸಕಿಯಾಗಿ ಗುರುತಿಸಿಕೊಂಡಿರುವ ಡಾ.ಅಂಜಲಿ ನಿಂಬಾಳ್ಕರ್ ಅವರು ಮೂಲತಃ ವೈದ್ಯೆ. ಆದರೆ ಸೇವಾ ಮನೋಭಾವದ ತುಡಿತ ಹೊಂದಿರುವ ಅವರು ಕನ್ನಡ ಹಾಗೂ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಖಾನಾಪುರ ಮತಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಜಯಭೇರಿ ಗಳಿಸಿದ್ದಾರೆ. ಈ ಬಾರಿಯೂ ಖಾನಾಪುರದಿಂದ ಮತ್ತೆ ಅಗ್ನಿಪರೀಕ್ಷೆಗೆ ಮುಂದಾಗಿರುವ ಅವರು ಉಭಯಭಾಷಿಕರ ಅಚ್ಚುಮೆಚ್ಚಿನ ಶಾಸಕಿಯಾಗಿ ಗುರುತಿಸಿಕೊಂಡಿದ್ದಾರೆ.
ಸಂಕಷ್ಟ ಕಾಲದಲ್ಲಿ ನೆರವಿಗೆ ನಿಂತ ವೈದ್ಯೆ :
ಬೆಳಗಾವಿಯ ಖ್ಯಾತ ವೈದ್ಯೆಯಾಗಿರುವ ಡಾ.ಸೋನಾಲಿ ಸರ್ನೋಬತ್ ಅವರು ತಮ್ಮನ್ನು ಕೇವಲ ವೈದ್ಯಕೀಯ ವೃತ್ತಿಗೆ ಮಾತ್ರ ಸೀಮಿತಗೊಳಿಸಿಕೊಂಡಿಲ್ಲ. ಮೊದಲಿನಿಂದಲೂ ವೈದ್ಯಕೀಯ ಬರಹಗಳು ಹಾಗೂ ಅಂಕಣಗಳ ಮೂಲಕ ಜನತೆಗೆ ಚಿರಪರಿಚಿತರಾದವರು. ಬಿಜೆಪಿ ಮೂಲಕ ರಾಜಕೀಯ ಪ್ರವೇಶಿಸಿರುವ ಅವರು ಕೋವಿಡ್ ಕಾಲದಲ್ಲಿ ಖಾನಾಪುರ ತಾಲೂಕಿನ ಹಳ್ಳಿಹಳ್ಳಿಗಳಿಗೆ ತೆರಳಿ ಜನಸೇವೆ ಮಾಡಿದ್ದಾರೆ. ಅವರ ಸೇವಾ ಕಾರ್ಯಗಳು ಇದೀಗ ಇಡೀ ಖಾನಾಪುರ ತಾಲೂಕಿನಲ್ಲೆಡೆ ಅತ್ಯಂತ ಚಿರಪರಿಚಿತವಾಗಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ವಿಧಾನಸಭೆಗೆ ಪ್ರವೇಶಿಸುವ ತವಕದಲ್ಲಿದ್ದಾರೆ. ತಮ್ಮ ಅದ್ಭುತ ವಾಕ್ಚಾತುರ್ಯ ಹಾಗೂ ಸಮಾಜ ಸೇವಾ ತುಡಿತದಿಂದ ಅವರು ಇದೀಗ ಖಾನಾಪುರ ಮತಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಖಾನಾಪುರ ಮತಕ್ಷೇತ್ರದಲ್ಲಿ ಕಮಲವನ್ನು ಅರಳಿಸಲು ಅತ್ಯಂತ ಸಮರ್ಥ ಮಹಿಳೆ ಎಂಬಷ್ಟು ಅವರ ಕಾರ್ಯಚಟುವಟಿಕೆಗಳು ಬಿಜೆಪಿ ವರಿಷ್ಠರ ಗಮನ ಸೆಳೆದಿವೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಖಾನಾಪುರ ಮತಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಜನಪ್ರಿಯ ವ್ಯಕ್ತಿತ್ವ ಹೊಂದಿರುವ ಡಾ.ಸೋನಾಲಿ ಸರ್ನೋಬತ್ ಅವರಿಗೆ ಟಿಕೆಟ್ ನೀಡಿ ಮತ್ತೊಮ್ಮೆ ಖಾನಾಪುರ ಮತಕ್ಷೇತ್ರದಲ್ಲಿ ಕಮಲ ಅರಳಿಸುವ ಚಿಂತನೆಯಲ್ಲಿದೆ.
ಕೊಡುಗೆ ದಾನಿ ಹಾಗೂ ಸೇವಾ ಕಾರ್ಯಕ್ಕೆ ಸದಾ ಮುಂದೆ ಮುಂದಿರುವ ಬಿಜೆಪಿಯ ಪ್ರಮುಖ ನಾಯಕಿಯಾಗಿ ಗುರುತಿಸಲ್ಪಡುತ್ತಿದ್ದಾರೆ. ಬಿಜೆಪಿಯಿಂದ ಖಾನಾಪುರ ಮತಕ್ಷೇತ್ರದಲ್ಲಿ ಈ ಬಾರಿ ಅವರಿಗೆ ಟಿಕೆಟ್ ನೀಡಿದಲ್ಲಿ ಸುಲಭ ಸಾಧ್ಯವಾಗಿ ಈ ಮತಕ್ಷೇತ್ರ ಕಮಲ ಪಕ್ಷದ ಪಾಲಾಗುವುದರಲ್ಲಿ ಯಾವ ಸಂದೇಹ ಇಲ್ಲ ಎಂಬ ಪೂರಕ ವಾತಾವರಣ ಸೃಷ್ಟಿಯಾಗಿದೆ.
ಅಲ್ಪಾವಧಿಯಲ್ಲೇ ಜನಪ್ರಿಯತೆ :
ಕಾಂಗ್ರೆಸ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಸುಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರ ಹೆಸರು ಬೆಳಗಾವಿ ಜಿಲ್ಲೆಯ ಮತಕ್ಷೇತ್ರಗಳಲ್ಲಿ ಆಗಾಗ ಕೇಳಿ ಬರುತ್ತಿದೆ. ಭವಿಷ್ಯದಲ್ಲಿ ಶಾಸಕಿ ಆಗುವ ಕನಸು ಕಂಡಿರುವ ಪ್ರಿಯಾಂಕಾ ಉನ್ನತ ಶಿಕ್ಷಣ ಪಡೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ಜನರ ಜೊತೆಗೆ ಬೆರೆತಿರುವ ಅವರು ರಾಜಕೀಯದಲ್ಲಿ ಉತ್ತುಂಗಕ್ಕೇರುವ ತವಕದಲ್ಲಿದ್ದಾರೆ.
ಕನ್ನಡ ಪರಿಚಾರಕಿ :
ಶಾಂತಾ ಆಚಾರ್ಯ ಬೆಳಗಾವಿಯಲ್ಲಿ ಕಳೆದ ಮೂರು ದಶಕಗಳಿಂದ ಸಾಹಿತ್ಯ, ಕಲೆ, ಸಂಘಟನೆ ಮೂಲಕ ಗುರುತಿಸಿಕೊಂಡಿದ್ದಾರೆ. ಪ್ರಯತ್ನ ಸಂಘಟನೆಯನ್ನು ಕೆಲ ಮಹಿಳೆಯರೊಂದಿಗೆ ಕಟ್ಟಿಕೊಂಡಿರುವ ಅವರು ಇದರ ಮೂಲಕ ಸಾಧ್ಯವಾದಷ್ಟು ಸಹಾಯ ಹಸ್ತ ನೀಡುತ್ತಿದ್ದಾರೆ.
ನಿರ್ಮಲಾ ಬಟ್ಟಲ್ :
ಮಹಾಂತೇಶ ನಗರ ರಹವಾಸಿಗಳ ಸಂಘದ ಬಿಎಡ್ ಕಾಲೇಜಿನ ಪ್ರಾಚಾರ್ಯರಾಗಿರುವ ನಿರ್ಮಲಾ ಬಟ್ಟಲ್ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದಾರೆ. ಕವನ, ಸಾಹಿತ್ಯ ಸೇರಿದಂತೆ ಅಂಕಣ ಬರಹಗಳ ಮೂಲಕ ನಾಡಿನ ಸಾಹಿತ್ಯ ಪ್ರಿಯರಿಗೆ ಚಿರಪರಿಚಿತರಾಗಿದ್ದಾರೆ.
Join The Telegram | Join The WhatsApp |