ಇಡಗುಂಜಿ ಕ್ಷೇತ್ರದ ಸ್ಥಳಪುರಾಣವೆಂದರೆ ಅದು ನಾರದ ಪುರಾಣೋಕ್ತವಾದುದು. ಉತ್ತರ ಕನ್ನಡ ಜಿಲ್ಲೆಯ ಘನ ವಿದ್ವಾಂಸರಾದ ಶ್ರೀ ಗಣೇಶ ಭಟ್ಟ ನಾಜಗಾರ ಮತ್ತು ಶ್ರೀ ಶಂಭು ಶರ್ಮಾ ನಾಜಗಾರ ಅವರು‌ ಈ ಸ್ಥಳಪುರಾಣ ಬರೆದಿದ್ದಾರೆ.

ಇಡಾಕುಂಜಾವನಂ ರಮ್ಯಂ
ಯತ್ರ ವಿಘ್ನೋಶೋಭೀಷ್ಟದಾಯಕಂ|
ಪೂಜಿತೋ ಮೋದಕೈ: ಪಂಚಖಾದ್ಯಾ
ದ್ವೈಸ್ತತ್ಸುನಿಶ್ಚಿತಂ||
ಇಡಗುಂಜಿ ಬಾಲ ಗಣಪತಿಯನ್ನು ನಾರದರು ವಾಲಖಿಲ್ಯ ಮುನಿಗಾಗಿ ಸ್ಥಾಪಿಸಿದ್ದು ಪೂರ್ವ ತ್ರೋತಾಯಣಸ್ಯ ನೃಪತೀಕ ಚಂಡಶಕಾಬ ೮೧೩ ನೇ ವಿಭವ ಸಂವತ್ಸರದ ಉತ್ತರಾಯಣದ ಶಿಶಿರ ಋತುವಿನ ಮಾಘ ಮಾಸದ ಶುಕ್ಲಪಕ್ಷ ದ್ವಿತೀಯಾ, ಬುಧವಾರ, ಉತ್ತರಾಷಾಢ ನಕ್ಷತ್ರದಲ್ಲಿ, ಮೀನಲಗ್ನದ ಇಷ್ಟಾಂಶದಲ್ಲಿ
ಈ ಇಡಗುಂಜಾವನ ಪ್ರದೇಶವನ್ನು ನಾರದರೇ ಶೋಧಿಸಿದ್ದು. ಅದಕ್ಕೆ ಕಾರಣ ವಾಲಖಿಲ್ಯ ಮುನಿಗಳ ತಪಸ್ಸಿದ್ಧಿಗಾಗಿ ಒಂದು ಪವಿತ್ರ ಸ್ಥಳದ ಅಗತ್ಯವಿತ್ತು. ಈ ಸ್ಥಳದ ಮಹಾತ್ಮೆಯನ್ನು ನಾರದರೇ ವಿವರಿಸುವಂತೆ –
” ಲೋಕದಲ್ಲೇ ಅತ್ಯಂತ ಸಿದ್ಧಿಪ್ರದವಾದ ಪುಣ್ಯ ಸ್ಥಳವಿದು. ಹರಿಹರ ಬ್ರಹ್ಮರು ದುಷ್ಟ ನಿಗ್ರಹಕ್ಕಾಗಿ ಶಕ್ತಿಸಿದ್ಧಿ ಪಡೆಯಲು ಇಲ್ಲಿಯೇ ತಪಸ್ಸು ಮಾಡಿದ್ದರು. ದುಷ್ಟ ನಿಗ್ರಹ ದೋಷ ನಿವಾರಣೆಗಾಗಿಯೂ ಇಲ್ಲಿಯೇ ತಪಸ್ಸು ಮಾಡಿದ್ದು.
ಇದರ ಪೂರ್ವ ದಿಕ್ಕಿನ ವನೌಷಧಿ ಪರ್ವತದಲ್ಲಿ ವಿಷ್ಣು ತನ್ನ ಚಕ್ರದಿಂದ ಚಕ್ರತೀರ್ಥವನ್ನು ನಿರ್ಮಿಸಿ ಅದರ ದಂಡೆಯಲ್ಲಿ ವಾಸಿಸಿದ್ದಾನೆ. ಪಶ್ಚಿಮ ದಿಕ್ಕಿನಲ್ಲಿ ಶಿವನು ತನ್ನ ಶೂಲದಿಂದ ಶೂಲತೀರ್ಥವನ್ನು ಸಿದ್ಧಿಗೊಳಿಸಿ ಅದರ ತಡಿಯಲ್ಲಿ ಕುಳಿತು ತಪಸ್ಸು ಮಾಡಿದ್ದಾನೆ. ಅದೇ ಕಾಲದಲ್ಲಿಯೇ ನಾನು ( ನಾರದ) ಸಕಲ ಸುರಮುನಿಗಳೊಂದಿಗೆ ವಾಯವ್ಯ ದಿಕ್ಕಿನ ಪರ್ವತಾಗ್ರದಲ್ಲಿ ಹೇಮತೀರ್ಥವನ್ನು ನಿರ್ಮಿಸಿ ಪರಮಾತ್ಮೋಪಾಸನವನ್ನು ಜರುಗಿಸಿದ್ದೆನು. ಪಶ್ಚಿಮದಲ್ಲಿ ಅಂಬಿಕೆಯು ಅಪ್ಸರಕೊಂಡದಲ್ಲಿ ತನ್ನ ಹೆಸರಿನ ತೀರ್ಥವನ್ನು ನಿರ್ಮಿಸಿ ತಪಸ್ಸು ಮಾಡಿದ್ದಳು. ಹೀಗೆ ಎಲ್ಲ ದಿಕ್ಕುಗಳಲ್ಲೂ ಪವಿತ್ರ ತಾಣಗಳನ್ನು ಹೊಂದಿದ ಸ್ಥಳ ಇದು. ಆದ್ದರಿಂದ ಪರಶುರಾಮ ಕ್ಷೇತ್ರದೊಳಗೆ ಶರಾವತೀ ನದಿಯ ವಾಮಪಾರ್ಶ್ವದಲ್ಲಿ ಇರುವ ಇಡಾಕುಂಜ ವನ ಮಹಾಸಿದ್ಧಿ ಸ್ಥಾನವಾಗಿದ್ದು ಅಲ್ಲಿ ಸಿದ್ಧಿವಿನಾಯಕನನ್ನು ಕ್ಷೇತ್ರಾಧೀಶನನ್ನಾಗಿ ಮಾಡಲು ನಾರದರು‌ ಸಂಕಲ್ಪಿಸಿದರು.
ಮುಂದೆ ಕೆಲವೊಂದು ಕಾರಣಗಳಿಂದ ಆ ಪ್ರದೇಶದೊಳಗಿನ ದ್ವಿಜ ಕುಟುಂಬಗಳು ತಮ್ಮ ನೆಲೆ ತ್ಯಜಿಸಿ ಬೇರೆ ಬೇರೆ ಕಡೆ ಹೋಗಿದ್ದರಿಂದ ಆ ಸ್ಥಳ ಅಬ್ರಾಹ್ಮಣ್ಯವಾಯಿತು. ಆಗ ವೈಜಯಂತೀಪುರವನ್ನು ಆಳುತ್ತಿದ್ದ ಕದಂಬ ದೊರೆ ಮಯೂರವರ್ಮ ಇಡಗುಂಜಿ ಗೋಕರ್ಣ ಸಹಿತ ಆ ಭೂಭಾಗದಲ್ಲಿ ಸಂಚರಿಸುವಾಗ ಅದು ದ್ವಿಜರಹಿತವೆನಿಸಿದ್ದನ್ನು ನೋಡಿ ಬೇಸರಪಟ್ಟು ಕಾಶಿಗೆ ಹೋಗಿ ತಿರುಗಿ ಬರುವಾಗ ಸರಸ್ವತೀ ತೀರದ ಅಹಿಚ್ಛತ್ರವೆಂಬಲ್ಲಿಂದ ಕೆಲವು ಬ್ರಾಹ್ಮಣ ಕುಟುಂಬಗಳನ್ನು ತಂದು ಪಂಚಕ್ಷೇತ್ರಗಳಲ್ಲೂ ಇಡಾಕುಂಜದಲ್ಲೂ ನೆಲೆಸುವಂತೆ ಮಾಡಿದ.
ಆದರೆ ಆ ಭಾಗದಲ್ಲಿ ಹುಚ್ಚಾಸಿ ( ಹುಬ್ಬಾಸಿ) ಎಂಬ ಒಬ್ಬ ದುಷ್ಟನ ಹಾವಳಿಯಿಂದ ಬ್ರಾಹ್ಮಣ ಕುಟುಂಬಗಳೆಲ್ಲ ಮತ್ತೆ ಬೇರೆಡೆಗೆ ಪಲಾಯನ ಮಾಡಿದರು. ಇದನ್ನು ಗಮನಿಸಿದ ಮಯೂರವರ್ಮ ಹುಚ್ಚಾಸಿಯನ್ನು ಬಂಧಿಸಿ ಸೆರೆಮನೆಗಟ್ಟಿ ಪುನಃ ಅಹಿಚ್ಛತ್ರಕ್ಕೆ ಹೋಗಿ ಏಳು ಗೋತ್ರಗಳ ಇಪ್ಪತ್ನಾಲ್ಕು ಕುಟುಂಬಗಳನ್ನು ಕರೆತಂದನಲ್ಲದೆ ಶರಾವತೀ ನದಿಯ ಒಡಲಿನಲ್ಲಿ “ಹವ್ಯಗುಂದ ” ( ಹೈಗುಂದ) ಎಂಬ ಕೃತ್ರಿಮ ದ್ವೀಪವನ್ನು ನಿರ್ಮಿಸಿ ಅಲ್ಲಿ ಬಹುಕಾಲ ಒಂದೇಕಡೆ ಇರುವಂತೆ ಮಾಡಿದನು. ನಂತರ ಕ್ರಮ ಕ್ರಮವಾಗಿ ತಾಲಗುಂದ, ಬನವಸೆ ( ಬನವಾಸಿ) , ಹರಿದ್ರಪುರ ಮೊದಲಾದೆಡೆಗಳಲ್ಲೆಲ್ಲ ಬ್ರಾಹ್ಮಣರು ನೆಲೆಸುವಂತಾಯಿತು. ಅಷ್ಟೇ ಅಲ್ಲ, ಕದಂಬ ರಾಜನ ಸಭಾಪತಿಯಾದ ಸಭಾಹಿತರನ್ನು ಇಡಗುಂಜಿ‌ ಗಣಪತಿಯ ಅರ್ಚನೆಗೆ ನೇಮಿಸಿದನೆಂದೂ ಹೇಳಲಾಗಿದೆ.
” ಅಥಾಮಾತ್ಯವರಾನ್ ರಾಜಾ ಸಮಾಹೂಯರಹಸ್ಥಿತಾನ್
ಅಪೃಚ್ಛದೇತದ್ವಿಪ್ರಾಣಾಂ
ಸ್ಥಿರೀಕರಣ ಸಾಧನಂ|
ತಾ ಊರುರೈಕ ಮತ್ಯೇನ
ವಿಘ್ನೇಶಸ್ಯ ಕೃಪಾಂ ವಿನಾ
ಹುಚ್ಚಾಸಿರ್ನ ವಂಶಗಚ್ಛೇತ್
ನವಸೇಯು: ಸ್ಥಿರಂ ದ್ವಿಜಾ:”||
ರಾವಣ ಪ್ರತಿಷ್ಠಾಪಿತವಾದ ಪಂಚ ಶಿವ ಕ್ಷೇತ್ರಗಳೆನಿಸಿದ ಗೋಕರ್ಣ, ಗುಣವಂತೆ, ಧಾರೇಶ್ವರ, ಸಿದ್ಧೇಶ್ವರ ಮತ್ತು ಮುರುಡೇಶ್ವರಗಳು ಇದೇ ಪರಶುರಾಮ ಕ್ಷೇತ್ರದಲ್ಲಿ ಇರುವುದೊಂದು ವಿಶೇಷ.

✒️ಲಕ್ಷ್ಮೀನಾರಾಯಣ ಶಾಸ್ತ್ರಿ ನಾಜಗಾರ