ಸುವರ್ಣ ವಿಧಾನಸೌಧ:ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ಡಿ. 26 ಮತ್ತು 27ರಂದು ನಡೆಯಲಿರುವ ಎಐಸಿಸಿ ಅಧಿವೇಶನಕ್ಕೆ ಬಿಜೆಪಿಯವರು ಅಡ್ಡಿಪಡಿಸಿದರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಐಸಿಸಿ ಅಧಿವೇಶನದ ದಿನವೇ ಬಿಜೆಪಿಯವರು ವಕ್ ವಿವಾದ ಸಂಬಂಧ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದಾರಲ್ಲ ಎಂಬ ಪ್ರಶ್ನೆಗೆ, ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸದೆ ಹೋಗಿದ್ದರೆ ನಾವೆಲ್ಲರೂ ಸ್ವತಂತ್ರವಾಗಿರಲು ಸಾಧ್ಯವಾಗುತ್ತಿತ್ತೇ? ಸಂವಿಧಾನ ರಚನೆಯಾದ ನಂತರವೇ ಇಂಥ ಹಕ್ಕುಗಳನ್ನು ಚಲಾಯಿಸಲು ಸಾಧ್ಯವಾಗಿರುವುದು. ಆದರೆ, ಬಿಜೆಪಿಯವರು ಸಂವಿಧಾನ ವಿರೋಧಿಗಳು, ಗೋಲ್ವಾಲ್ಕರ್, ಹೆಡಗೆವಾರ್, ಸಾವರ್ಕ‌್ರಸೇರಿ ಹಲವು ಬಿಜೆಪಿಗರು ಸಂವಿಧಾನ ವಿರೋಧಿಸಿದ್ದರು. ಭಾರತೀಯತೆಯಲ್ಲಿ ನಂಬಿಕೆ ಹೊಂದಿಲ್ಲದ ಇವರು ಮನುಸ್ಮೃತಿಗೆ ಒತ್ತು ನೀಡುವವರಾಗಿದ್ದಾರೆ. ನಮ್ಮ ಮಹಾತ್ಮಾಗಾಂಧಿ ಅವರನ್ನು ಆಧರಿಸಿದ ಈ ಎಐಸಿಸಿ ಅಧಿವೇಶನಕ್ಕೆ ಅಡ್ಡಿಪಡಿಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.