ಬೆಳಗಾವಿ: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ರಾಜ್ಯಕ್ಕೆ ನ್ಯಾಯ ಒದಗಿಸುವ ದಿಸೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಬೇಕಿದೆ. ಇಲ್ಲವಾದಲ್ಲಿ ಪ್ರಜಾಪ್ರಭುತ್ವ ದೊಡ್ಡ ಅಪಾಯದಲ್ಲಿ ಸಿಲುಕಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಭಾನುವಾರ ನಡೆದ ರೆಡ್ಡಿ ಸಮಾಜಗಳ ಸೇರಿದಂತೆ ವಿವಿಧ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಯೊಬ್ಬ ಮುಖಂಡರು ತಮ್ಮದೇ ಚುನಾವಣೆ ಎನ್ನುವಂತೆ ಕೆಲಸ ಮಾಡಿ, ಕಾಂಗ್ರೆಸ್ ಅಭ್ಯರ್ಥಿಗಳಾದ ಮೃಣಾಲ್‌ ಹೆಬ್ಬಾಳ್ಕರ್, ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ ಪಕ್ಷ ಗೆದ್ದರೆ ಪ್ರಜಾಪ್ರಭುತ್ವ ಗೆದ್ದಂತೆ ಎಂದು ಹೇಳಿದರು.

* *ಗೃಹಲಕ್ಷ್ಮಿ ಯೋಜನೆ ಅನುಷ್ಠಾನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪಾತ್ರ ದೊಡ್ಡದು*
ಬಡಜನರ ಒಳಿತಿಗಾಗಿ ಕಾಂಗ್ರೆಸ್ ಸರ್ಕಾರದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಇಡೀ ದೇಶದಲ್ಲೆ ಅಪರೂಪದ ಯೋಜನೆ ಎಂದರೆ ಗೃಹಲಕ್ಷ್ಮಿ ಯೋಜನೆ. ಇದರ ಅನುಷ್ಠಾನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಶ್ರಮ ಸಾಕಷ್ಟಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು. ಕಾಂಗ್ರೆಸ್ ಸರ್ಕಾರದ ಯೋಜನೆಗಳು ಶೇಕಡ 98 ರಷ್ಟು ಜನರಿಗೆ ತಲುಪುತ್ತಿವೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆ ಒಂದು ಕ್ರಾಂತಿಕಾರಿ ಯೋಜನೆಯಾಗಿದೆ. ಅದರ ಯಶಸ್ಸಿಗೆ ಹಗಲಿರುಳು ಶ್ರಮಿಸಿದ್ದಾರೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ಹೇಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಇದೀಗ ಗ್ಯಾರಂಟಿ ಯೋಜನೆಗಳ ಮೊರೆ ಹೋಗಿದ್ದಾರೆ. ಯೋಜನೆಗಳ ವಾರ್ಷಿಕ ಬಜೆಟ್ 50 ಸಾವಿರ ಕೋಟಿ ರೂಪಾಯಿ, ಆದರೆ ಕೇಂದ್ರ ಸರ್ಕಾರ 10 ಲಕ್ಷ ಕೋಟಿ ಶ್ರೀಮಂತರ ಸಾಲವನ್ನು ಮನ್ನಾ ಮಾಡುವ ಮೂಲಕ ಶ್ರೀಮಂತರ ಸರ್ಕಾರ ಎಂದು ನಿರೂಪಿಸಿದೆ ಎಂದು ಎಚ್.ಕೆ.ಪಾಟೀಲ್ ಟೀಕಿಸಿದರು. ಕರ್ನಾಟಕದ ಪಾಲಿಗೆ ಬರಬೇಕಾಗಿದ್ದ ಬರ ಪರಿಹಾರ ಕೊಟ್ಟಿಲ್ಲ. ಏಳು ತಿಂಗಳ ಹಿಂದೆಯೇ ಬರ ಪರಿಹಾರಕ್ಕೆ ಮನವಿ ಮಾಡಿದರೂ ಒಂದೇ ಒಂದು ನಯಾಪೈಸೆ ಕೊಡಲಿಲ್ಲ ಎಂದು ಹೇಳಿದರು. ನಮಗೆ ಶ್ರೀಮಂತರ ಸಹಕಾರ ಇಲ್ಲ. ಏನಿದ್ದರೂ ಬಡವ ದೀನ ದಲಿತರು ಮಾತ್ರ ಕಾಂಗ್ರೆಸ್ ಪರ ಇದ್ದಾರೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

* *ಸುಳ್ಳಿನ ಅರಮನೆ ಬಿಜೆಪಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*
ಬಿಜೆಪಿ ಸುಳ್ಳಿನ‌ ಅರಮನೆ ಇದ್ದಂತೆ. ಜನರನ್ನು ದಿಕ್ಕು ತಪ್ಪಿಸಿ, ಅಧಿಕಾರಕ್ಕೇರಿದೆ. ಆದರೆ ಕಾಂಗ್ರೆಸ್ ಪಕ್ಷ ಬದ್ಧತೆಗೆ ಹೆಸರಾಗಿದೆ. ಬಡ ಜನರ ಪಾಲಿಗೆ ಆಶಾಕಿರಣವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಬಿಜೆಪಿ ಕರೋನಾ ವೇಳೆ ಸಂಸ್ತ್ರರಿಗೆ ಪರಿಹಾರ ನೀಡುವುದಾಗಿ ಘೋಷಿಸಿ,‌ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಎಸಗಿದೆ. ಎಲ್ಲಿ ಹೋಯಿತು ಆ ಹಣ? ಪ್ರಶ್ನಿಸುವವರೇ ಯಾರು ಇಲ್ಲ ಎಂದರು. ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣವಿದ್ದು, ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವು ಗ್ಯಾರಂಟಿ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ‌ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್, ಮಾಜಿ ಸಚಿವ ಎ.ಬಿ.ಪಾಟೀಲ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ್ ಮಾತನಾಡಿದರು.

ಮಾಜಿ ಸಚಿವ ಎ.ಬಿ‌.ಪಾಟೀಲ್, ಬೆಳಗಾವಿ ರೆಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ, ಉಪಾಧ್ಯಕ್ಷ ಟಿ.ಕೆ.ಪಾಟೀಲ್, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸವದತ್ತಿ ಮಾಜಿ ಶಾಸಕ ರಾಮನಗೌಡ ಪಾಟೀಲ್, ಕೆಪಿಸಿಸಿ ಸದಸ್ಯ ರಾಜೇಂದ್ರ ಪಾಟೀಲ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ನಾವಲಗಟ್ಟಿ, ಡಾ.ಗಿರೀಶ್ ಸೋನ್ವಾಲ್ಕರ್, ಶಿವನಗೌಡ ಪಾಟೀಲ, ರಮೇಶ್ ಜಂಗಲ್, ಉಮೇಶ್ ಬಾಳಿ ಸೇರಿದಂತೆ ಸಮಾಜದ ನೂರಾರು ಮುಖಂಡರು ಉಪಸ್ಥಿತರಿದ್ದರು.