
ನವದೆಹಲಿ: ಕರ್ನಾಟಕದಲ್ಲಿ ಕಾರ್ಮಿಕ ಇಲಾಖೆಯು 12.39 ಲಕ್ಷ ಕಟ್ಟಡ ಕಾರ್ಮಿಕರಿಗೆ ನ್ಯೂಟ್ರಿಷಿಯನ್ ಕಿಟ್‌ಗಳನ್ನು ವಿತರಿಸಿದೆ. ಇದರಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು.
ರಾಜ್ಯಸಭೆಯಲ್ಲಿ ಮಂಗಳವಾರ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಚರ್ಚೆಯಲ್ಲಿ ಪಾಲ್ಗೊಂಡ ಅವರು, ‘ಪ್ರತಿ ಕಿಟ್‌ಗೆ ಮಾರುಕಟ್ಟೆಯಲ್ಲಿ ಸರಾಸರಿ ₹1000 ಬೆಲೆ ಇದೆ. ಆದರೆ, ಇಲಾಖೆಯು ₹2,600ಕ್ಕೆ ಖರೀದಿಸಿದೆ. ಇದರಲ್ಲಿ ₹75 ಕೋಟಿ ಹಗರಣ ನಡೆಸಲಾಗಿದೆ’ ಎಂದರು.
‘ರಾಜ್ಯದ 18 ವೈದ್ಯಕೀಯ ಕಾಲೇಜುಗಳಿಗೆ 114 ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳ ಖರೀದಿ ಮತ್ತು ಆಧುನೀಕರಣದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಅಕ್ರಮ ನಡೆಸಿದೆ. ಇದರಲ್ಲಿ ₹117 ಕೋಟಿ ಹಗರಣ ಆಗಿದೆ’ ಎಂದು ಅವರು ಆರೋಪಿಸಿದರು.
‘ಕೇಂದ್ರ ಸರ್ಕಾರದ ಇಂದ್ರಧನುಷ್ ಮತ್ತು ಮಾತೃವಂದನ ಯೋಜನೆಗಳನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ 19 ತಿಂಗಳಲ್ಲಿ 736 ಬಾಣಂತಿಯರು ಹಾಗೂ 1100 ನವಜಾತ ಶಿಶುಗಳು ಸಾಯಲು ರಾಜ್ಯ ಸರ್ಕಾರದ ಧೋರಣೆಯೇ ಕಾರಣ’ ಎಂದು ಅವರು ಹೇಳಿದರು.
‘ಬೆಳಗಾವಿಯಲ್ಲಿ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ಸ್ಥಾಪಿಸಲು ಕೇಂದ್ರ ಸರ್ಕಾರ 2023ರ ಫೆಬ್ರುವರಿಯಲ್ಲಿ ಅನುಮೋದನೆ ನೀಡಿತ್ತು. ರಾಜ್ಯ ಸರ್ಕಾರ ಈವರೆಗೆ ಜಮೀನು ಒದಗಿಸಿಲ್ಲ. ಈ ಮೂಲಕ ಕಿತ್ತೂರು ಕರ್ನಾಟಕದ ಜನರಿಗೆ ದ್ರೋಹ ಬಗೆದಿದೆ’ ಎಂದು ದೂರಿದರು.