ಬೆಳಗಾವಿ :
ಮಶ್ರೂಮ್ ಬೀಜಗಳ ಚೀಲದ ಮಧ್ಯದಲ್ಲಿ ಗೋವಾ ಸಾರಾಯಿ ಬಾಕ್ಸ್ ಗಳನ್ನಿಟ್ಟು ಸಿನಿಮಾ ಮಾದರಿಯಲ್ಲಿ ಮದ್ಯ ಸಾಗಿಸುತ್ತಿದ್ದವರು ಕೊನೆಗೂ ಸಿಕ್ಕಿಬಿದ್ದಿದ್ದಾರೆ.
ಗೋವಾದಿಂದ ಕರ್ನಾಟಕ ಮಾರ್ಗವಾಗಿ ಮಧ್ಯಪ್ರದೇಶಕ್ಕೆ ಮದ್ಯ ಸಾಗಾಟ ಮಾಡಲಾಗುತ್ತಿತ್ತು ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.

ಅಬಕಾರಿ ಇಲಾಖೆ ಅಧಿಕಾರಿಗಳು ನಗರದಲ್ಲಿ ಶುಕ್ರವಾರ ಬೆಳಗ್ಗೆ ಈ ಭರ್ಜರಿ ಬೇಟೆ ನಡೆಸಿದ್ದು, ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಮದ್ಯ ಮತ್ತು 30 ಲಕ್ಷ ರೂಪಾಯಿ ಮೌಲ್ಯದ ಲಾರಿಯನ್ನು (ಒಟ್ಟು 55 ಲಕ್ಷ ರೂ. ಮೌಲ್ಯ) ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕಾಕತಿ ಬಳಿ ದಾಳಿ ನಡೆಸಿದ ಅಬಕಾರಿ ಪೊಲೀಸರು, ಲಾರಿ ಸಮೇತ ಮದ್ಯದ ಬಾಕ್ಸ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಬಾಗಲಕೋಟೆ ಮೂಲದ ಆದಮ್ ಕುತಬುದ್ದೀನ್ ಮತ್ತು ಆಶೀಫ್ ರೆಹಮಾನ್ ಎಂಬುವರನ್ನು ಬಂಧಿಸಲಾಗಿದ್ದು, ಲಾರಿ ಚಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

17 ಚಕ್ರದ ದೊಡ್ಡ ಲಾರಿಯಲ್ಲಿ ಸುಮಾರು 650 ಬಾಕ್ಸ್ ಗಳಲ್ಲಿ ಮದ್ಯವನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡಲಾಗುತ್ತಿತ್ತು.

ಮದ್ಯದ ಬಾಟಲಿಗಳಿಗೆ ನಕಲಿ ಲೇಬಲ್ ಅಂಟಿಸಿ ಸಾಗಣೆ ಮಾಡಲಾಗುತ್ತಿತ್ತು. ಅಸಲಿಯಾಗಿ ಬಾಟಲಿಗಳ ಮೇಲಿದ್ದ ಲೇಬಲ್ ಪರಿಶೀಲಿಸಿದಾಗ ಅಂತಹ ಡಿಸ್ಟಲರಿ ಕಂಪನಿ ಗೋವಾದಲ್ಲಿ ಇಲ್ಲ ಎಂಬುವುದು ಗೊತ್ತಾಗಿದೆ. ಮದ್ಯದ ಬಾಕ್ಸ್ ಗಳ ಮೇಲೆ ಮಶ್ರೂಮ್ ಬೀಜಗಳ ಚೀಲಗಳನ್ನಿಟ್ಟು ಸಾಗಿಸಲಾಗುತ್ತಿತ್ತು. ರಾತ್ರಿ ಕಾಕತಿಯ ಗ್ಯಾರೇಜ್ ನಲ್ಲಿ ಲಾರಿ ರಿಪೇರಿಗೆ ನಿಂತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ತಮಿಳುನಾಡು, ಮದ್ಯಪ್ರದೇಶಕ್ಕೆ ಮದ್ಯ ಸಾಗಣೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.