ಬೆಂಗಳೂರು: ಸರ್ಕಾರಿ ಪ್ರೌಢಶಾಲೆಗಳ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರು ಅಥವಾ ತತ್ಸಮಾನ ಗ್ರೂಪ್‌ ಬಿ ವೃಂದಕ್ಕೆ ಬಡ್ತಿ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿದೆ.

2008ರ ನಂತರ ಪ್ರೌಢಶಾಲೆಗಳಲ್ಲಿ ಸಹಶಿಕ್ಷಕರಾಗಿ ಸೇವೆಗೆ ಸೇರಿದ ಹಾಗೂ ನ್ಯಾಯಾಲಯಗಳಲ್ಲಿ ಪ್ರಕರಣ ಬಾಕಿ ಇರುವ ಶಿಕ್ಷಕರನ್ನು ಹೊರತುಪಡಿಸಿ ಉಳಿದ ಶಿಕ್ಷಕರಿಗೆ ಖಾಲಿ ಹುದ್ದೆಗಳ ಆಧಾರದಲ್ಲಿ ವಿಶೇಷ ಬಡ್ತಿ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಬೆಂಗಳೂರು, ಮೈಸೂರು ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಬಡ್ತಿ ಮೂಲಕ ತುಂಬಲಾಗುತ್ತದೆ. ಪ್ರತಿ ಶಿಕ್ಷಕರ ಪ್ರಸ್ತಾವನೆಯನ್ನು ಡಿಡಿಪಿಐ ದೃಢೀಕರಣದೊಂದಿಗೆ ಮಾರ್ಚ್‌ 11ರ ಒಳಗಾಗಿ ಆಯುಕ್ತರ ಕಚೇರಿಗೆ ಸಲ್ಲಿಸಲು ಶಾಲಾ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಸೂಚಿಸಿದ್ದಾರೆ.