
ಉಜಿರೆ: ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿರುವ ರಾಮಕ್ಷೇತ್ರದ ಶಾಖಾಮಠವನ್ನು ಅಯೋಧ್ಯೆಯಲ್ಲಿ ಪ್ರಾರಂಭಿಸಲು ಯೋಜಿಸಿದ್ದು, ನೂತನ ಕಟ್ಟಡದ ಶಿಲಾನ್ಯಾಸ ಮತ್ತು ಭೂಮಿಪೂಜೆ ಸಮಾರಂಭಮೇ 19ರಂದು ಬೆಳಿಗ್ಗೆ 10ಕ್ಕೆ ನಡೆಯಲಿದೆ ಎಂದು ರಾಮಕ್ಷೇತ್ರದ ಪೀಠಾಧೀಶ, ಮಹಾಮಂಡಲೇಶ್ವರ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಶುಕ್ರವಾರ ಕನ್ಯಾಡಿಯಲ್ಲಿ ರಾಮಕ್ಷೇತ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಒಂದು ಎಕರೆಯಲ್ಲಿ 31 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿರುವ ನಾಲ್ಕು ಅಂತಸ್ತುಗಳ ಕಟ್ಟಡ ನಿರ್ಮಾಣಗೊಳ್ಳಲಿದೆ. ಇದರಲ್ಲಿ 40 ಕೊಠಡಿಗಳಿದ್ದು 700 ಮಂದಿಗೆ ಪ್ರಾರ್ಥನೆ, ಧ್ಯಾನಕ್ಕೆ ಅನುಕೂಲವಾಗಿರುವ ಸಭಾಭವನವನ್ನು ಅಳವಡಿಸಲಾಗುವುದು ಎಂದು ಸ್ವಾಮೀಜಿ ಮಾಹಿತಿ ನೀಡಿದರು.
ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಮಧುಬಂಗಾರಪ್ಪ, ಮಂಕಾಲ ಎಸ್.ವೈದ್ಯ, ಶಾಸಕರಾದ ಹರೀಶ್ ಪೂಂಜ, ಸುನಿಲ್ ಕುಮಾರ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ರಾಮ ಜನ್ಮಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸಂಪತ್‌ರಾಯ್, ವಿವಿಧ ಮಠಾಧಿಪತಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.