ಬೆಳಗಾವಿ : ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ನ್ಯಾಯ ಸಮ್ಮತವಾದ ಪ್ರಕ್ರಿಯೆ ಮಾಡಬೇಕು. ಚುನಾವಣಾ ಆಯೋಗವು ಸೂಚಿಸಿದ ನಿಯಮಗಳ ಪಾಲನೆ ಆಗಬೇಕು. ಈ ಸಂದರ್ಭದಲ್ಲಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದಲ್ಲಿ ಕಠಿಣ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಚಿಕ್ಕೋಡಿ ಲೋಕಸಭೆ ಕ್ಷೇತ್ರ ಚುನಾವಣಾಧಿಕಾರಿ ಹಾಗೂ ಜಿಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದರು.

ಚಿಕ್ಕೋಡಿ ಪಟ್ಟಣದ ಕನ್ವೆನ್ಷನ್ ಹಾಲ್‌ನಲ್ಲಿ ಚಿಕ್ಕೋಡಿ ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಕುರಿತು ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮುದಾಯಗಳ ನಡುವೆ, ಧಾರ್ಮಿಕ ಅಥವಾ ಭಾಷಿಕ ನಡುವೆ ಉದ್ವಿಗ್ನತೆ ಉಂಟುಮಾಡುವ ಯಾವುದೇ ಚಟುವಟಿಕೆಗೆ ಅವಕಾಶ ನೀಡಬಾರದು. ಲೋಕಸಭೆ ಚುನಾವಣೆಯಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಚುನಾವಣೆ ಯಶಸ್ವಿಗೊಳಿಸಬೇಕು ಎಂದರು.
ವಿಶೇಷ ಜಿಲ್ಲಾಧಿಕಾರಿ ಗೀತಾ ಕೌಲಗಿ ಮಾತನಾಡಿ, ಭಾರತ ಹೊರತುಪಡಿಸಿ ವಿಶ್ವದ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಮಾದರಿ ನೀತಿ ಸಂಹಿತೆ ಪರಿಕಲ್ಪನೆ ಇಲ್ಲ. ೧೯೬೦ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗವು ಮೊದಲ ಬಾರಿಗೆ ಮಾದರಿ ನೀತಿ ಸಂಹಿತೆ ಜಾರಿ ಮಾಡಿತು. ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು, ಆಯಾ ಪಕ್ಷಗಳು ಯಾವ ರೀತಿ ನಡೆದುಕೊಳ್ಳಬೇಕು. ಯಾವ ರೀತಿ ಪ್ರಚಾರ ಕೈಗೊಳ್ಳಬೇಕು. ಅಭ್ಯರ್ಥಿಗಳು ಹಾಗೂ ಮತದಾರರು ಏನು ಮಾಡಬಾರದು. ಯಾವ ವಿಚಾರವನ್ನು ಗಮನದಲ್ಲಿಡಬೇಕು ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತದೆ. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ತರಬೇತಿ ಪಡೆದು ತಮ್ಮ ಕರ್ತವ್ಯ ಮಾಡಬೇಕು ಎಂದರು.