ಬೆಂಗಳೂರು : ಕೋಲಾರ ಕಾಂಗ್ರೆಸ್‌ನ ಹಿರಿಯ ನಾಯಕರಾದ ಕೆ.ಎಚ್‌. ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್‌ ಕೆ.ಆರ್‌. ರಮೇಶಕುಮಾರ ಬಣಗಳ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು,ಸಚಿವ ಕೆ.ಎಚ್‌. ಮುನಿಯಪ್ಪ ಅವರ ಅಳಿಯ ಪೆದ್ದಚಿಕ್ಕಣ್ಣಗೆ ಟಿಕೆಟ್‌ ಬಹುತೇಕ ಖಚಿತವಾಗುತ್ತಿದ್ದಂತೆ ಕಾಂಗ್ರೆಸ್‌ ಶಾಸಕರ ರಾಜೀನಾಮೆ ನೀಡಲು ಮುಂದಾದ ವಿದ್ಯಮಾನ ನಡೆದಿದೆ. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಮಧ್ಯಪ್ರವೇಶದಿಂದ ಸದ್ಯಕ್ಕೆ ಅಲ್ಲಿಗೇ ನಿಂತಿದೆ.

ಕೆಎಚ್‌ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್‌ ನೀಡಿದ್ದು, ವಿಧಾನ ಪರಿಷತ್‌ ಸದಸ್ಯರಾದ ನಜೀರ್‌ ಅಹ್ಮದ್‌ ಹಾಗೂ ಅನಿಲಕುಮಾರ ಅವರು ಪರಿಷತ್‌ ಸ್ಪೀಕರ್‌ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಲು ಸಮಯ ಕೇಳಿ ನಂತರ ರಾಜೀನಾಮೆ ನೀಡದೇ ವಾಪಸ್‌ ಆದ ವಿದ್ಯಮಾನವೂ ನಡೆದಿದೆ. ರಾಜೀನಾಮೆ ಪತ್ರವನ್ನು ಮಾಧ್ಯಮಗಳಿಗೆ ತೋರಿಸಿರುವ ಪರಿಷತ್‌ ಸದಸ್ಯರು ಯಾವಾಗ ಬೇಕಾದರೂ ರಾಜೀನಾಮೆ ಕೊಡಬಹುದು ಎಂದು ಹೇಳಿದ್ದಾರೆ. ಈ ಮೂಲಕ ಸಚಿವ ಕೆಎಚ್‌ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್‌ ನೀಡಡದಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರು, ಕೋಲಾರ ಪರಿಷತ್‌ ಸದಸ್ಯರು ರಾಜೀನಾಮೆ ನೀಡುವುದಾಗಿ ದೂರವಾಣಿ ಮೂಲಕ ಕರೆ ಮಾಡಿ ಹೇಳಿದ್ದರು, ಬೆಳಗ್ಗೆ 11:30ರೊಳಗೆ ಬನ್ನಿ ಎಂದು ಸಮಯ ನೀಡಿದ್ದೆ. ಅಷ್ಟರೊಳಗೆ ಬಂದಿಲ್ಲ. ಮಧ್ಯಾಹ್ನ ಹೊತ್ತಿಗೆ ಬಿಳಿ ಕಾಗದದಲ್ಲಿ ಬರೆದು ತಂದಿದ್ದರು. ಲೆಟರ್ ಹೆಡ್ ಅಲ್ಲಿ ಅಧಿಕೃತವಾಗಿ ಬರೆದುಕೊಡಿ ತೆಗೆದುಕೊಳ್ಳುತ್ತೇನೆ ಎಂದೆ. ಅವರು ಕೊಡಲಿಲ್ಲ, ಹಾಗಾಗಿ ರಾಜೀನಾಮೆ ಸ್ವೀಕರಿಸಲಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಎಂ.ಸಿ. ಸುಧಾಕರ, ಕೋಲಾರ ಶಾಸಕ ಕೊತ್ತೂರು ಮಂಜುನಾಥ, ಮಾಲೂರು ಶಾಸಕ ಕೆ.ವೈ. ನಂಜೇಗೌಡ ಹಾಗೂ ಬಂಗಾರಪೇಟೆ ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ ಸಹ ರಾಜೀನಾಮೆಗೆ ಮುಂದಾಗಿದ್ದು, ಈಗಾಗಲೇ ಮಂಗಳೂರಿಗೆ ವಿಮಾನ ಬುಕ್‌ ಮಾಡಿದ್ದು, ವಿಧಾನಸಭಾ ಸ್ಪೀಕರ್‌ ಯುಟಿ ಖಾದರ್‌ ಅವರ ಸಮಯವನ್ನು ಕೂಡ ಕೇಳಿದ್ದಾರೆ ಎಂದು ವರದಿಯಾಗಿದೆ.

ಈ ಬೆಳವಣಿಗೆಗಳಿಂದ ಆಗುವ ಪಕ್ಷಕ್ಕೆ ಆಗುವ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿರುವ ಕಾಂಗ್ರೆಸ್‌ ನಾಯಕರು ಅಸಮಾಧಾನಿತರ ಮನವೊಲಿಕೆಗೆ ಮುಂದಾಗಿದ್ದಾರೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ ಸಂಧಾನಕ್ಕೆ ಮುಂದಾಗಿದ್ದು, ಶಾಸಕರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಿಕ್ಕಟ್ಟು ಶಮನಕ್ಕೆ ಮುಂದಾಗಿದ್ದು ಅಸಮಾಧಾನಿತರಿಗೆ ಕರೆ ಮಾಡಿ ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ಹೇಳಿದ್ದಾರೆ, ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸಹ ಅತೃಪ್ತರ ಜೊತೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದು, ಆದರೆ ಸದ್ಯಕ್ಕೆ ಅಸಮಾಧಾನ ಬಗೆಹರಿದಿಲ್ಲ ಎನ್ನಲಾಗಿದೆ.
ಕೋಲಾರದಲ್ಲಿ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ಕೆಆರ್ ರಮೇಶಕುಮಾರ ಬಣಗಳ ನಡುವೆ ತಿಕ್ಕಾಟ ಜೋರಾಗಿದ್ದು, ಎಡಗೈ ಸಮುದಾಯಕ್ಕೆ ಸೇರಿರುವ ಕೆ.ಎಚ್. ಮುನಿಯಪ್ಪ ತಮ್ಮ ಕುಟುಂಬಕ್ಕೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ, ಮಾಜಿ ಸ್ಪೀಕರ್ ಕೆ.ಆರ್. ರಮೇಶಕುಮಾರ ಅವರು ಬಲಗೈ ಸಮುದಾಯಕ್ಕೆ ಟಿಕೆಟ್ ನೀಡುವಂತೆ‌ ಪಟ್ಟು ಹಿಡಿದಿದ್ದಾರೆ. ಈ ಬಿಕ್ಕಟ್ಟು ಉಲ್ಬಣವಾಗಿ ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ.