ಬೆಳಗಾವಿ : ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಬಿಜೆಪಿ ನಾಯಕರು ಈ ಗೆಲುವಿಗಾಗಿ ಅಹರ್ನಿಶಿ ಶ್ರಮ ವಹಿಸಿದ್ದರು. ಅದರಲ್ಲೂ ಕಟ್ಟಾ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನೇ ನಿಯೋಜಿಸಿ ಅದರಲ್ಲಿ ಯಶಸ್ಸು ಸಾಧಿಸಿದೆ. ಬೆಳಗಾವಿಯ ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿಯ ಕಟ್ಟಾಳು ಎನಿಸಿರುವ ಈರಣ್ಣ ಕಡಾಡಿ ಅವರಿಗೆ ಸೊಲ್ಲಾಪುರದ ಉಸ್ತುವಾರಿಯನ್ನು ವಹಿಸಲಾಗಿತ್ತು. ಆ ಪ್ರಯತ್ನದಲ್ಲಿ ಈರಣ್ಣ ಕಡಾಡಿ ಅವರು ಸುಮಾರು ಒಂದೂವರೆ ತಿಂಗಳುಗಳ ಕಾಲ ಸೊನ್ನಾಲಿಗೆಯ ಸಿದ್ದರಾಮನ ಪುಣ್ಯಕ್ಷೇತ್ರದಲ್ಲಿ ಬೀಡು ಬಿಟ್ಟು ಭರ್ಜರಿ ಚುನಾವಣಾ ಪ್ರಚಾರ ಮಾಡಿ ಕೇಸರಿ ಪಡೆಗೆ ಗೆಲುವಿನ ಸಿಹಿ ಉಡುಗೊರೆ ನೀಡಿದ್ದಾರೆ.
ಸೊಲ್ಲಾಪುರದ ಎಂಟು ವಿಧಾನಸಭಾ ಮತಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಈ ಬಾರಿ ಕಮಲ ಅರಳಲು ಈರಣ್ಣ ಕಡಾಡಿ ನೇರ ಕಾರಣರಾಗಿದ್ದಾರೆ. ಸೊಲ್ಲಾಪುರ ಉತ್ತರ, ದಕ್ಷಿಣ ಮತ್ತು ಮಧ್ಯ ಕ್ಷೇತ್ರ, ಅಕ್ಕಲಕೋಟೆ, ಪಂಢರಾಪುರ ಹಾಗೂ ತುಳಜಾಪುರದಲ್ಲಿ ಬಿಜೆಪಿ ಎದುರಾಳಿಗಳ ಇನ್ನಿಲ್ಲದ ತಂತ್ರಗಳ ನಡುವೆಯೂ ಪಾರಮ್ಯ ಸಾಧಿಸಿದೆ. ಚುನಾವಣೆ ಮುಗಿಯುವವರೆಗೂ ಕ್ಷೇತ್ರದಲ್ಲಿ ಬೀಡು ಬಿಟ್ಟು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿ ಕೇಸರಿ ಪಡೆಗೆ ಅಭೂತಪೂರ್ವ ಜಯ ತಂದುಕೊಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿರುವ ಈರಣ್ಣ ಕಡಾಡಿ ಅವರು ಪಕ್ಷ ನೀಡಿದ ಜವಾಬ್ದಾರಿಯನ್ನು ಅತ್ಯಂತ ಸಾಮರ್ಥ ರೀತಿಯಲ್ಲಿ ನಿಭಾಯಿಸುವ ಮೂಲಕ ಪಕ್ಷ ನಾಯಕರಿಂದ ಈಗ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದ್ದಾರೆ. ಅವರ ರಣತಂತ್ರದ ಫಲವಾಗಿ ಸೊಲ್ಲಾಪುರ ಜಿಲ್ಲೆಯಲ್ಲಿ ಕಮಲ ಈ ಬಾರಿ ಹುಲಸಾಗಿ ಹುಲುಸಾದ ಬೆಳೆ ಬರಲು ಕಾರಣವಾಗಿದೆ. ಬಿಜೆಪಿಯ ಹಿರಿಯ ನಾಯಕರು ಹಾಗೂ ಅತ್ಯಂತ ನಿಷ್ಠಾವಂತ ಧುರೀಣರೆನಿಸಿರುವ ಈರಣ್ಣ ಕಡಾಡಿ ಅವರು ಪಕ್ಷ ಸಂಘಟನೆಯಲ್ಲಿ ಮೊದಲಿನಿಂದಲೂ ಹೆಸರುವಾಸಿ. ಇದೀಗ ಮಹಾರಾಷ್ಟ್ರದ ಕನ್ನಡಿಗರ ಭದ್ರಕೋಟೆಯಲ್ಲಿ ಲಿಂಗಾಯತ ಮತಗಳನ್ನು ಒಗ್ಗೂಡಿಸುವ ಮೂಲಕ ಬಿಜೆಪಿಗೆ ಬಹುದೊಡ್ಡ ಜಯದ ಶ್ರೇಯಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ.