ಉಡುಪಿ : ಏರ್‌ ಇಂಡಿಯಾದ ಗಗನಸಖಿ ಮತ್ತು ಆಕೆಯ ಕುಟುಂಬದ ಮೂವರು ಸದಸ್ಯರನ್ನು ಆಕೆಯ ಸಹೋದ್ಯೋಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಘಟನೆ ನಡೆದ ಮೂರು ತಿಂಗಳ ನಂತರ ಉಡುಪಿ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಫೆಬ್ರವರಿ 12 ರಂದು ಚಾರ್ಜ್‌ಶೀಟ್ ಸಲ್ಲಿಸಿದ ಮಲ್ಪೆ ಪೊಲೀಸರು, ಹತ್ಯೆಗೆ ಅತಿಯಾದ ಗೆಳೆತನ, ಪ್ರೀತಿ, ವ್ಯಾಮೋಹ, ಕೆಲ ಸಮಯ ನಂತರ ಆಕೆ ಆತನಿಂದ ದೂರವಾದ ಬಗ್ಗೆ ಉಂಟಾದ ದ್ವೇಷಕ್ಕೆ ಪ್ರವೀಣ ಈ ಕೃತ್ಯ ಎಸಗಿದ್ದಾನೆ ಎಂಬ ವಿಚಾರವನ್ನು ಆರೋಪಟ್ಟಿಯಲ್ಲಿ ಹೇಳಲಾಗಿದೆ.

300 ಸಾಕ್ಷಿಗಳಿರುವ 2,250 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಸಿಸಿಟಿವಿ, ಫೋನ್ ಕರೆ, ಹೇಳಿಕೆಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳೇ ಪ್ರಮುಖ ಸಾಕ್ಷಿಗಳಾಗಿ ಪರಿಗಣಿಸಲಾಗಿದೆ.
ನವೆಂಬರ್ 12 ರಂದು ನೇಜಾರು ಗ್ರಾಮದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಚೌಗುಲೆಯನ್ನು ಉಡುಪಿ ಪೊಲೀಸರು ನವೆಂಬರ್ 15ರಂದು ಬೆಳಗಾವಿ ಜಿಲ್ಲೆಯ ಕುಡಚಿಯ ಆತನ ಸಂಬಂಧಿಕರ ಮನೆಯಲ್ಲಿ ಬಂಧಿಸಿದ್ದರು.

ಚೌಗುಲೆ ತನ್ನ ಸಹೋದ್ಯೋಗಿ ಅಯ್ನಾಜ್ ಎಂ (2೩), ಅವರ ತಾಯಿ ಹಸೀನಾ ಎಂ (47), ಅಕ್ಕ ಅಫ್ನಾನ್ ಎಂಎನ್ (23) ಮತ್ತು ಅಪ್ರಾಪ್ತ ಸಹೋದರ ಅಸೀಮ್ ಎಂ (14) ಎಂಬವರನ್ನು ಉಡುಪಿಯ ಮಲ್ಪೆ ಬಳಿ ಇದ್ದ ಕುಟುಂಬದ ಮನೆಯಲ್ಲಿ ಕೊಲೆ ಮಾಡಿದ ಆರೋಪ ಹೊತ್ತಿದ್ದಾನೆ. ಅಯ್ನಾಜ್ ಅವರ ಅಜ್ಜಿ ಹಾಜಿರಾ ಎಂ ಅವರನ್ನು ಕೊಲ್ಲಲು ಪ್ರಯತ್ನಿಸಿದ ಆರೋಪವೂ ಆತನ ಮೇಲಿದೆ. ಅವರು ಸ್ನಾನದ ಮನೆಯೊಳಗೆ ಹೋಗಿ ಬೀಗ ಹಾಕಿಕೊಂಡು ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಎಂಟು ತಿಂಗಳ ಸ್ನೇಹ ವಿಫಲವಾದ ನಂತರ ಗಗನಸಖಿಯ ಮೇಲೆ ಚೌಗುಲೆ ಅತಿಯಾದ ಗೀಳು ಹೊಂದಿದ್ದೇ ನಾಲ್ಕು ಕೊಲೆಗಳ ಹಿಂದಿನ ಉದ್ದೇಶ ಎಂದು ಉಡುಪಿ ಪೊಲೀಸರು ಆರೋಪಟ್ಟಿಯಲ್ಲಿ ಸೂಚಿಸಿದ್ದಾರೆ.ಈ ವಿಷಯ ಪ್ರವೀಣ ಪತ್ನಿಗೆ ತಿಳಿಯಿತು. ಹೀಗಾಗಿ ಇಬ್ಬರೂ ಜಗಳವಾಡಿದರು. ಪ್ರವೀಣ ಪತ್ನಿ ಅಫ್ನಾನ್ ಮತ್ತು ಅವರ ಕುಟುಂಬದೊಂದಿಗೆ ಜಗಳವಾಡಿದ್ದರು.ಈ ಘಟನೆಯ ನಂತರ ಅಯ್ನಾಜ್‌ ಪ್ರವೀಣ್ ಜೊತೆಗಿನ ಎಲ್ಲಾ ಸಂವಹನವನ್ನು ನಿಲ್ಲಿಸಿದರು. ಇದನ್ನು ಸಹಿಸದ ಆರೋಪಿ ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದನು.

ಸ್ವಯಂಪ್ರೇರಿತ ಹೇಳಿಕೆಯಲ್ಲಿ, ಚೌಗುಲೆ ತನ್ನ ಸಹೋದ್ಯೋಗಿ ಅಯ್ನಾಜ್ ಮೇಲೆ ದಾಳಿ ಮಾಡಲು ಉದ್ದೇಶಿಸಿದ್ದ ಮತ್ತು ಇತರರು ತನ್ನನ್ನು ತಡೆಯಲು ಪ್ರಯತ್ನಿಸಿದಾಗ ಅವರನ್ನು ಕೊಲೆ ಮಾಡಿದ್ದ ಎಂದು ವರದಿಯಾಗಿದೆ.
ದಾಳಿಯಿಂದ ತಪ್ಪಿಸಿಕೊಂಡ ಅಜ್ಜಿ ಹಾಜಿರಾ, ಸ್ಥಳೀಯ ಆಟೋ ರಿಕ್ಷಾ ಚಾಲಕರು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸೆಲ್ಯುಲಾರ್ ಫೋನ್ ಬಳಕೆಯಂತಹ ತಾಂತ್ರಿಕ ಪುರಾವೆಗಳು ಸೇರಿದಂತೆ ಪ್ರತ್ಯಕ್ಷದರ್ಶಿ ಹೇಳಿಕೆಗಳನ್ನು ಆಧರಿಸಿ ಪೊಲೀಸರು ಶಂಕಿತನ ಜಾಡು ಹಿಡಿದು ಬಂಧಿಸಿದ್ದರು.
ಡಿಸೆಂಬರ್ 2023 ರಲ್ಲಿ, ಉಡುಪಿ ಜಿಲ್ಲಾ ನ್ಯಾಯಾಲಯವು ಪ್ರಕರಣದ ಗಂಭೀರತೆಯ ಆಧಾರದ ಮೇಲೆ ಇಬ್ಬರು ಮಕ್ಕಳಿರುವ ವಿವಾಹಿತ ಚೌಗುಲೆ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.