ಬೆಂಗಳೂರು :
“ಹಿರಿಯ ನಟಿ ಲೀಲಾವತಿ ಅವರು ಕಟ್ಟಿಸಿದ ಪಶುವೈದ್ಯಕೀಯ ಆಸ್ಪತ್ರೆ ಉದ್ಘಾಟಿಸಿದ್ದು ನನ್ನ ಮನಸ್ಸಿಗೆ ನೆಮ್ಮದಿ ಕೊಟ್ಟ ಕೆಲಸ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮತ್ತು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಲೀಲಾವತಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಬಳಿಕ ಮಾಧ್ಯಮಗಳ ಜತೆ ಶನಿವಾರ ಮಾತನಾಡಿದರು.
“ಕೊನೆಯ ಬಾರಿಗೆ ನನ್ನ ಮನೆಯ ಬಳಿ ಬಂದು ಸ್ವತಃ ಲೀಲಾವತಿ ಅವರೇ ಆಸ್ಪತ್ರೆ ಉದ್ಘಾಟನೆಗೆ ಆಹ್ವಾನ ಪತ್ರಿಕೆ ನೀಡಿದ್ದರು. ಆ ವೇಳೆ ಎಲ್ಲರನ್ನು ಗುರುತು ಹಿಡಿಯುತ್ತಿದ್ದರು, ಕೊಂಚ ಪ್ರಜ್ಞೆಯಿತ್ತು. ನೀವು ಬಂದು ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ ಮಾಡಬೇಕು ಎಂಬುದು ನನ್ನ ಜೀವನದ ಕೊನೆಯ ಆಸೆ. ನೀವು ಉದ್ಘಾಟನೆಗೆ ಬರಬೇಕು ಎಂದು ಮನವಿ ಮಾಡಿಕೊಂಡಿದ್ದರು.
“ನನ್ನ ಸಾಕಷ್ಟು ಕೆಲಸಗಳ ಒತ್ತಡದ ನಡುವೆಯೂ ಆಸ್ಪತ್ರೆ ಉದ್ಘಾಟನೆ ಮಾಡಿದ್ದೆ. ಯಾರೂ ಕೇಳದೆ ಇದ್ದರೂ ಅವರಾಗಿಯೇ ಪಶುವೈದ್ಯಕೀಯ ಆಸ್ಪತ್ರೆ ಕಟ್ಟಿಸಿದ್ದರು. ಇದು ಅವರ ಹೃದಯ ವೈಶಾಲ್ಯತೆಗೆ ಒಂದು ಸಾಕ್ಷಿ” ಎಂದು ಶಿವಕುಮಾರ್ ಅವರು ಬಣ್ಣಿಸಿದರು.
“ನನ್ನ ಮತ್ತು ಲೀಲಾವತಿ ಅವರ ಪರಿಚಯ ನಲವತ್ತು ವರ್ಷಗಳಷ್ಟು ಹಳೆಯದು. ದುಡ್ಡಿರುವ ಮನುಷ್ಯ ದಾನ- ಧರ್ಮ ಮಾಡಬಹುದು, ಆದರೆ ಆರ್ಥಿಕವಾಗಿ ಶಕ್ತಿ ಇಲ್ಲದ ಅವರು ಸಮಾಜಕ್ಕೆ ಮತ್ತು ಮೂಕ ಪ್ರಾಣಿಗಳಿಗೆ ಸಹಾಯ ಮಾಡಬೇಕೆಂದು ಪ್ರಾಥಮಿಕ ಆಸ್ಪತ್ರೆ ಮತ್ತು ಪಶು ವೈದ್ಯಕೀಯ ಆಸ್ಪತ್ರೆ ನಿರ್ಮಿಸಿದ್ದು ದೊಡ್ಡ ವಿಷಯ ಮತ್ತು ಸಮಾಜಕ್ಕೆ ದೊಡ್ಡ ಸಂದೇಶ” ಎಂದು ತಿಳಿಸಿದರು.
*ಸರ್ಕಾರಿ ಗೌರವಗಳೊಂದಿಗೆ ಡಾ. ಎಂ. ಲೀಲಾವತಿ ಅವರ ಅಂತ್ಯಕ್ರಿಯೆ*
“ಎಲ್ಲವೂ ಭಗವಂತನ ಲೀಲೆ. ಮನುಷ್ಯ ಹುಟ್ಟಿದ ಮೇಲೆ ಸಾವನ್ನಪ್ಪಲೇ ಬೇಕು. ಹುಟ್ಟು, ಸಾವಿನ ನಡುವೆ ಸಾಧನೆ ಮಾಡಬೇಕು. ಹಿರಿಯರಾದ ಲೀಲಾವತಿ ಅವರ ಸಾಧನೆ ಮತ್ತು ಸಾರ್ಥಕ ಜೀವನ ನಮಗೆಲ್ಲ ಆದರ್ಶ. ಸರ್ಕಾರ ಎಲ್ಲ ತರಹದ ಗೌರವದಿಂದ ಲೀಲಾವತಿ ಅಮ್ಮನವರನ್ನು ಕಳಿಸಿಕೊಡುವ ಕೆಲಸ ಮಾಡುತ್ತದೆ. ಸಕಲ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ” ಎಂದರು.
ಲೀಲಾವತಿ ಅವರ ಹೆಸರಿನಲ್ಲಿ ಕಲಾಸೇವೆ, ಸಮಾಜಮುಖಿ ಕೆಲಸಗಳು ಉಳಿಸುವಂತಹ ಕೆಲಸವನ್ನು ಸರ್ಕಾರದಿಂದ ಮಾಡಲಾಗುವುದೇ ಎಂದು ಕೇಳಿದಾಗ “ಸರ್ಕಾರ ಎಂದರೆ ನಾನೊಬ್ಬನೆ ಅಲ್ಲ. ಈ ಬಗ್ಗೆ ಲೀಲಾವತಿ ಅವರ ಪಾರ್ಥಿವ ಶರೀರದ ಎಲ್ಲ ಅಂತಿಮ ಕಾರ್ಯಗಳು ಮುಗಿದ ನಂತರ, ಪ್ರಮುಖರ ಬಳಿ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ” ಎಂದು ಹೇಳಿದರು.