This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

27 ರಂದು ಕನ್ನಡ ಭವನ ರಂಗ ಮಂದಿರದ ಉದ್ಘಾಟನೆ

Join The Telegram Join The WhatsApp

ಬೆಳಗಾವಿ ಕನ್ನಡಿಗರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪೂರಕವಾಗಿ ಬಹುದಿನಗಳ ಕನಸಾದ ಕನ್ನಡ ಭವನ ರಂಗ ಮಂದಿರ ಇದೀಗ ಉದ್ಘಾಟನೆ ಸಜ್ಜಾಗಿದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಒಂದು ದಶಕದ ನಂತರ ರೂಪುಗೊಂಡಿರುವ ಕನ್ನಡ ಭವನದ ರಂಗಮಂದಿರದ ಉದ್ಘಾಟನೆ ಇದೇ 27 ಡಿಸೆಂಬರ್ 2022 ರಂದು ಜರುಗುತ್ತಿರುವುದು ಬೆಳಗಾವಿ ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಸಮಾರಂಭದ ದಿವ್ಯ ಸಾನಿಧ್ಯವನ್ನು ಡಂಬಳ ಗದಗ ತೋಂಟದ ಜಗದ್ಗುರುಗಳಾದ ಪೂಜ್ಯಶ್ರೀ ಡಾ. ಸಿದ್ದರಾಮ ಮಹಾಸ್ವಾಮೀಜಿ ವಹಿಸಲಿದ್ದಾರೆ. ರಂಗಮಂದಿರದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಎಸ್. ಸುನಿಲ್ ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬೆಳಗಾವಿ ಸಂಸದೆ ಮಂಗಲಾ ಸುರೇಶ ಅಂಗಡಿ, ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ನಟಿ ಗಿರಿಜಾ ಲೋಕೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಆಗಮಿಸಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರು, ಕನ್ನಡ ಸಾಂಸ್ಕೃತಿಕ ಭವನದ ಅಧ್ಯಕ್ಷ ಡಾ. ಪ್ರಭಾಕರ ಕೋರೆ ವಹಿಸಲಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಸಾಹಿತಿಗಳಾದ ಡಾ.ಬಸವರಾಜ ಜಗಜಂಪಿ, ಬಿ.ಎಸ್.ಗವಿಮಠ, ಏಣಗಿ ಸುಭಾಷ, ಯ.ರು.ಪಾಟೀಲ, ಬಸವರಾಜ ಗಾರ್ಗಿ, ಮಂಗಲಾ ಮೆಟಗುಡ್ಡ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

ಬೆಳಗಾವಿ :

ಕುಂದಾನಗರಿ ಬೆಳಗಾವಿ ಕರ್ನಾಟಕದ ಹೆಮ್ಮೆ ಜಿಲ್ಲೆ. ರಾಜ್ಯದಲ್ಲಿಯೇ ದೊಡ್ಡ ಜಿಲ್ಲೆ. ಕನ್ನಡಾಂಬೆಯ ಮಣಿಮಕುಟ. ಸಾಂಸ್ಕೃತಿಕ ವಾಗಿ ಶ್ರೀಮಂತವಾದ ಜಿಲ್ಲೆ. ಗಡಿ ಕನ್ನಡಿಗರ ಬಹುದಿನಗಳ ಕನಸಿನ ಪ್ರತಿಫಲವಾಗಿ, 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮಾರಕ ಸಾಂಸ್ಕೃತಿಕ ಭವನ ಡಾ. ಪ್ರಭಾಕರ ಕೋರೆಯವರ ಅದಮ್ಯ ಇಚ್ಛಾಶಕ್ತಿಯಂತೆ ಬೆಳಗಾವಿಯ ಹೃದಯ ಭಾಗದಲ್ಲಿ ಇಂದು ತಲೆಯೆತ್ತಿ ನಿಂತಿದೆ.

ಕನ್ನಡ ಭವನ ರಂಗಮಂದಿರದ ಅಗತ್ಯತೆ: ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಮತ್ತು ರಂಗ ಚಟುವಟಿಕೆಗಳು ಗಡಿ ಭಾಗದಲ್ಲಿ ನಿರಂತರವಾಗಿ ಜರುಗಬೇಕೆಂಬ ಉದಾತ್ತ ಉದ್ದೇಶ ಡಾ. ಪ್ರಭಾಕರ ಕೋರೆ ಅವರದು. 2003 ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಸ್ಥಾನವನ್ನು ಕನ್ನಡದ ಕಟ್ಟಾಳು ಡಾ. ಪಾಟೀಲ್ ಪುಟ್ಟಪ್ಪನವರು ವಹಿಸಿದ್ದರು. ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರು. ನಾಗನೂರಿನ ಪೂಜ್ಯ ಶ್ರೀ ಡಾ.ಸಿದ್ಧರಾಮ ಮಹಾ ಸ್ವಾಮೀಜಿಯವರು, ಕಾರಂಜಿಮಠದ ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮೀಜಿಯವರ ದಿವ್ಯ ನೇತೃತ್ವದಲ್ಲಿ ಜರುಗಿದ ಈ ಸಮ್ಮೇಳನ ಯಶಸ್ವಿಯಾಗಿ ಜರುಗಿತು. ಸಮ್ಮೇಳನ ನಂತರ ಉಳಿಕೆಯ ಹಣ ಇಟ್ಟು 21 ಗುಂಟೆ ನಿವೇಶನದಲ್ಲಿ ಕನ್ನಡ ಸಾಂಸ್ಕೃತಿಕ ಭವನದ ನಿರ್ಮಾಣಕ್ಕೆ ಭಾಷ್ಯ ಬರೆದರು. ಅಂದಿನ ನಗರಸೇವಕರು, ಉತ್ಸಾಹಿ ಯುವನಾಯಕ ಶಿವನಗೌಡ ಪಾಟೀಲರ ಪ್ರಯತ್ನ, ಅಂದಿನ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮೋಹನಗೌಡ ಪಾಟೀಲರ ಸಹಕಾರಗಳು ನಿವೇಶನ ದೊರೆಯುವಲ್ಲಿ ಫಲಪ್ರದಾಯಿಕವಾಯಿತು.

2006 ರ ಬೆಳಗಾವಿ ವಿಧಾನ ಮಂಡಲಗಳ ಅಧಿವೇಶನ ಸಂದರ್ಭದಲ್ಲಿ 28 ಸೆಪ್ಟೆಂಬರ್ 2006 ಕನ್ನಡ ಭವನ ಅಡಿಗಲ್ಲು ಸಮಾರಂಭದ ಶಂಕುಸ್ಥಾಪನೆಯು ಅಂದಿನ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಪ ಡಾ. ಸಿದ್ದರಾಮ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನೆರವೇರಿಸಿದರು.

2010 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಕೊಡುಗೈಯ ದೊರೆ ಬಿ.ಎಸ್. ಯಡಿಯೂರಪ್ಪನವರು ಮೂರು ಕೋಟಿ ಅನುದಾನವನ್ನು ನೀಡಿದರೆ, ಮತ್ತೆ 2020ರಲ್ಲಿ 3.27 ಕೋಟಿ ಅನುದಾನವನ್ನು ನೀಡಿ ಸಹಕರಿಸಿದರು. ಡಾ. ಪ್ರಭಾಕರ ಕೋರೆ ಅವರು ಜನಪ್ರತಿನಿಧಿಗಳಿಂದ 90 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಭವ್ಯ ಕಟ್ಟಡದ ನಿರ್ಮಾಣಕ್ಕೆ ಅಹರ್ನಿಶಿ ಶ್ರಮಿಸಿದರು. ಇಂದು ಸಕ್ಕರೆಯ ಜಿಲ್ಲೆ ಬೆಳಗಾವಿಯಲ್ಲಿ ಮೂರು ಅಂತಸ್ತಿನ ಭವ್ಯ ಸಾಂಸ್ಕೃತಿಕ ಭವನ ಭವ್ಯವಾಗಿ ರಾರಾಜಿಸುತ್ತಿದೆ. ಬೆಳಗಾವಿ ಗಡಿ ಕನ್ನಡಿಗರ ಕನಸು ಸಾಕಾರಗೊಂಡಿದೆ.

ರಂಗಮಂದಿರದ ವೈಶಿಷ್ಟ್ಯಗಳು:

ಕನ್ನಡ ಭವನದ ರಂಗ ಮಂದಿರವು ವಿಶಾಲವಾದ ಪ್ರಾಂಗಣವನ್ನು ಹೊಂದಿರುವುದು. ಮಾತ್ರವಲ್ಲದ ಸಂಪೂರ್ಣ ಹವಾ ನಿಯಂತ್ರಿತವಾಗಿದೆ. ಸೊಸಜ್ಜಿತವಾದ 300 ಕ್ಕೂ ಹೆಚ್ಚು ಆಸನಗಳನ್ನು ಹೊಂದಿದೆ. ಸಾಹಿತಿಗಳಿಗೆ ಕಲಾವಿದರಿಗೆ ಉಳಿದುಕೊಳ್ಳಲು ಅತಿಥಿ ಕೋಣೆಗಳನ್ನು ನಿರ್ಮಿಸಲಾಗಿದೆ. ಅತ್ಯಾಧುನಿಕ ತಾಂತ್ರಿಕ ಧ್ವನಿ ವ್ಯವಸ್ಥೆಯೊಂದಿಗೆ ಧ್ವನಿ ಮುದ್ರಣ ಹೊಂದಿದೆ. ಆಕರ್ಷಕವಾದ ಬೆಳಕಿನ ವ್ಯವಸ್ಥೆ, ನೇಪಥ್ಯ ಕೋಣೆಗಳು, ಮುಂಭಾಗದಲ್ಲಿ ಹತ್ತು ಮಳಿಗೆಗಳು ವಿನೂತನವೆನಿಸಿವೆ. ಕನ್ನಡ ಭವನದ ಹೊರಭಾಗದಲ್ಲಿ ಕಪ್ಪು ಗ್ಲಾಸುಗಳನ್ನು ಬಳಸಲಾಗಿದ್ದು ಅತ್ಯಾಕರ್ಷಕವೆನಿಸಿದೆ. ಹಿಂಭಾಗದಲ್ಲಿ ವಿಶಾಲವಾದ ವಾಹನ ನಿಲುಗಡೆಗೆ ಸ್ಥಳಾವಕಾಶವನ್ನು ಮಾಡಿಕೊಡಲಾಗಿದೆ.


Join The Telegram Join The WhatsApp
Admin
the authorAdmin

Leave a Reply