ಗುಡ್ಡಾಪುರ (ಮಹಾರಾಷ್ಟ್ರ): ಸಾಂಗಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಗುಡ್ಡಾಪುರದಲ್ಲಿ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ₹10.96 ಕೋಟಿ ಅನುದಾನದಲ್ಲಿ ನಿರ್ಮಿಸಲಾಗಿರುವ ‘ಕರ್ನಾಟಕ ಭವನ’ವನ್ನು ಗುರುವಾರ ಲೋಕಾರ್ಪಣೆ ಮಾಡಲಾಯಿತು.

‘ಕರ್ನಾಟಕ ಭವನ’ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, 12ನೇ ಶತಮಾನದಲ್ಲೇ ಬಸವಣ್ಣ ಮಹಿಳೆಯರಿಗೆ ಆದ್ಯತೆ ನೀಡಿದ್ದರು. ಅಕ್ಕಮಹಾದೇವಿ, ದಾನಮ್ಮ ದೇವಿ ಅವರಲ್ಲಿ ಮುಖ್ಯರಾಗಿದ್ದಾರೆ.

ದಾನಮ್ಮ ದೇವಿ ದರ್ಶನಕ್ಕೆ ಉತ್ತರ ಕರ್ನಾಟಕದ ಮಹಿಳೆಯರು ಪಾದಯಾತ್ರೆ ಮೂಲಕ ಪ್ರತಿವರ್ಷ ಭೇಟಿ ನೀಡಿ ದರ್ಶನ ಪಡೆಯುವುದು ವಿಶೇಷವಾಗಿದೆ ಎಂದರು. ಮುಜರಾಯಿ ಸಚಿವೆಯಾಗಿದ್ದಾಗ ದೇವಿಯ ಸೇವೆ ಮಾಡುವ ಅವಕಾಶ ಲಭಿಸಿತ್ತು. ಎರಡು ಎಕರೆ ಭೂಮಿಯಲ್ಲಿ ₹10.96 ಲಕ್ಷವನ್ನು ಕರ್ನಾಟಕ ಭವನಕ್ಕೆ ಮಂಜೂರು ಮಾಡಿದೆ ಎಂದರು.

ಕರ್ನಾಟಕ ಭವನದಲ್ಲಿ ಏಕಕಾಲಕ್ಕೆ ಒಂದು ಸಾವಿರ ಜನ ಕುಳಿತುಕೊಳ್ಳುವ, ದಾಸೋಹ ಮಾಡುವ ವ್ಯವಸ್ಥೆ ಕಲಿಸಲಾಗಿದೆ ಎಂದರು.

ರಾಜ್ಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ನೆರೆ ರಾಜ್ಯಗಳಲ್ಲಿರುವ ಪ್ರಮುಖ ಯಾತ್ರಾ ಸ್ಥಳಗಳಾದ ಪಂಢರಪುರ, ತುಳಜಾಪುರ, ಮಂತ್ರಾಲಯ, ಶಬರಿಮಲೆಯಲ್ಲಿ ಕರ್ನಾಟಕದ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಾಣಕ್ಕೆ ನಾನು ಮುಜರಾಯಿ ಇಲಾಖೆ ಸಚಿವೆಯಾಗಿದ್ದಾಗ ಅನುದಾನ ನೀಡಿದ್ದು, ನಿರ್ಮಾಣ ಹಂತದಲ್ಲಿವೆ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀ ದಾನಮ್ಮ ದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿಜುಗೌಡ ಪಾಟೀಲ, ₹60 ಕೋಟಿ ವೆಚ್ಚದಲ್ಲಿ ದಾನಮ್ಮ ದೇವಿ ದೇವಸ್ಥಾನವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಚಟ್ಟಿ ಅಮಾವಾಸ್ಯೆಗೆ ಲಕ್ಷಾಂತರ ಭಕ್ತರು ಬರುತ್ತಾರೆ. ಆದರೆ, ದೇವಸ್ಥಾನ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಆಗಿಲ್ಲ. ಮಹಾರಾಷ್ಟ್ರ ಸರ್ಕಾರದಿಂದ ನಯಾ ಪೈಸೆ ಅನುದಾನ ಇದುವರೆಗೂ ಸಿಕ್ಕಿಲ್ಲ. ಕರ್ನಾಟಕ ಸರ್ಕಾರದಿಂದ ಮಾತ್ರ ಲಭಿಸಿದೆ ಎಂದು ಹೇಳಿದರು.

ದೇವಸ್ಥಾನದ ಪೂಜಾರಿಗಳು, ದೇವಸ್ಥಾನದ ಕಮಿಟಿಯವರು ಹಾಗೂ ಭಕ್ತರು ಕೂಡಿ ಕೆಲಸ ಮಾಡಿದರೆ ಗುಡ್ಡಾಪುರ ಕ್ಷೇತ್ರವು ತಿರುಪತಿ ಕ್ಷೇತ್ರದಂತೆ ಪ್ರಸಿದ್ಧ ಜೊತೆಗೆ ಅಭಿವೃದ್ಧಿ ಆಗಲಿದೆ ಎಂದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚಿಕ್ಕಮಗಳೂರು ಜಿಲ್ಲೆ ಗೌರಿಗದ್ದೆಯ ಶ್ರೀದತ್ತ ಆಶ್ರಮದ ವಿನಯ್ ಗುರೂಜಿ, ದೇವಸ್ಥಾನ ನಿರ್ಮಾಣಕ್ಕೆ ₹50 ಲಕ್ಷ ದೇಣಿಗೆ ನೀಡಲಾಗುವುದು ಎಂದು ಹೇಳಿದರು.

ಉತ್ತರ ಕರ್ನಾಟಕದ ಮಣ್ಣಿನ ಕಣಕಣದಲ್ಲಿ ಸಂಸ್ಕಾರ ಇದೆ. ಭಕ್ತರನ್ನು ನೋಡಬೇಕು ಎಂದಾದರೆ ಉತ್ತರ ಕರ್ನಾಟಕಕ್ಕೆ ಬರಬೇಕು ಎಂದರು.

ರಾಜಕಾರಣಕ್ಕೆ ಮಿತಿ ಇದೆ. ಧರ್ಮಕ್ಕೆ, ಮಠಕ್ಕೆ ಯಾವುದೇ
ಮಿತಿ ಇಲ್ಲ ಎಂದರು.

ದಾನಮ್ಮದೇವಿಯು ಬಸವಣ್ಣನ ಮಹಾ ಭಕ್ತಿಯಾಗಿದ್ದರು. ಬಸವಣ್ಣನ ಸೇವೆಯಲ್ಲಿ ಇಡೀ ಜೀವನ ಕಳೆಯುತ್ತಾಳೆ. ದಾನಮ್ಮನ ದಾಸೋಹ, ಭಕ್ತಿ ಮಹಿಮೆಯು ಬಸವಣ್ಣನನ್ನೇ ಗುಡ್ಡಾಪುರ ಕ್ಷೇತ್ರಕ್ಕೆ ಕರೆಯಿಸಿಕೊಂಡಿರುವ ಇತಿಹಾಸ ಇದೆ ಎಂದರು.

ಮುಗಳಖೋಡದ ಜಿಡಗಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ, ಬಬಲೇಶ್ವರ ಬೃಹನ್ಮಠದ ಮಹಾದೇವ ಶಿವಾಚಾರ್ಯರು, ಗುಡ್ಡಾಪುರದ ಗುರುಪಾದ ಶಿವಾಚಾರ್ಯ ಹಿರೇಮಠ, ಗೌಡಗಾಂವದ ಜಯಸಿದ್ದೇಶ್ವರ ಸ್ವಾಮೀಜಿ, ಮನಗೂಳಿಯ ಅಭಿನವ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.