ಬೆಳಗಾವಿ : ಲಕ್ಷ್ಮೀತಾಯಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 8ನೇ ಶಾಖೆಯನ್ನು ಧಾರವಾಡ ಜಿಲ್ಲೆಯ ಗರಗದಲ್ಲಿ ಬುಧವಾರ ಸಂಘದ ನಿರ್ದೇಶಕ ಮೃಣಾಲ ಹೆಬ್ಬಾಳಕರ್ ಉದ್ಘಾಟಿಸಿದರು.

ಈಗಾಗಲೇ ವಿವಿಧ ಸ್ಥಳಗಳಲ್ಲಿರುವ ಸಂಘದ ಶಾಖೆಗಳು ಉತ್ತಮ ಏಳಿಗೆ ಕಂಡಿದ್ದು, ಈ ಶಾಖೆಯು ಕೂಡ ಎತರಕ್ಕೆ ಬೆಳೆಯಲಿದೆ ಎನ್ನುವ ವಿಶ್ವಾಸವನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

ಅಲ್ಪಾವಧಿಯಲ್ಲಿ ಸಂಸ್ಥೆ ಅಧಿಕ ಠೇವಣಿ ಹೊಂದಿದ್ದು, ಉತ್ತಮ ಬೆಳವಣಿಗೆಯತ್ತ ಸಾಗುತ್ತಿದೆ. ವಿಶೇಷವಾಗಿ ರೈತರಿಗೆ ಸಂಸ್ಥೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಗರಗ ಶಾಖೆಯೂ ಕೂಡ ಎಲ್ಲರ ನೆರವಿನಿಂದ ಉತ್ತಮ ಬೆಳವಣಿಗೆ ಕಾಣಲಿದೆ ಎಂಬ ವಿಶ್ವಾಸವಿದೆ ಎಂದು ಮೃಣಾಲ ಹೆಬ್ಬಾಳಕರ್ ಹೇಳಿದರು.

ರೈತರಿಗೆ, ಬಡವರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲೆನ್ನುವ ಉದ್ದೇಶದಿಂದ ಈ ಸಹಕಾರಿ ಸಂಘವನ್ನು ಆರಂಭಿಸಲಾಗಿದೆ. ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಮತ್ತು ಹೆಚ್ಚಿನ ಬಡ್ಡಿಯಲ್ಲಿ ಠೇವಣಿ ಇಡುವುದಕ್ಕೆ ಅವಕಾಶ ನೀಡಲಾಗುವುದು. ಚಿಕ್ಕಪುಟ್ಟ ವ್ಯಾಪಾರಿಗಳಿಗೆ ಸ್ವಂತ ಉದ್ಯೋಗ ಕಟ್ಟಿಕೊಳ್ಳಲು ಸಾಲ ಸೌಲಭ್ಯ ನೀಡಲಾಗುತ್ತಿದೆ, ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸಾಲದ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗಾಗಿ ಸ್ವಾವಲಂಬಿ ಜೀವನ ನಡೆಸಲು ನಮ್ಮ ಸಂಸ್ಥೆ ಹಲವಾರು ಸೌಲಭ್ಯಗಳನ್ನು ರೂಪಿಸಿದೆ ಎಂದೂ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಲಕ್ಷ್ಮೀತಾಯಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ಧಾರವಾಡ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ತವನಪ್ಪಾ ಅಷ್ಟಗಿ, ಸಂಘದ ಸಿಇಓ ಸಾಗರ ಇಂಗಳಗಿ, ಸಂಗಮೇಶ ಶಿವಸಂಗಯ್ಯನವರಮಠ, ಸಚಿನ ಹಟ್ಟಿಹೊಳಿ, ಸೋಮಶೇಖರ ಕುರಬೇಟ, ನಾಗರಾಜ ಮುರಗೋಡ, ಸಿದ್ದರಾಮ ಹುಚ್ಚನವರ, ಗರಗ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಉಪಸ್ಥಿತರಿದ್ದರು.