ನವದೆಹಲಿ : ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ದರವನ್ನು ನವೆಂಬರ್ 1 ರಿಂದ 62 ರೂ.ಗಳಷ್ಟು ಹೆಚ್ಚಿಸಲಾಗಿದೆ.

ದೆಹಲಿಯಲ್ಲಿ ಈಗ ವಾಣಿಜ್ಯ ಅನಿಲ ಸಿಲಿಂಡರ್‌ ಬೆಲೆ 1,740 ರೂ.ನಿಂದ 1,802 ರೂ.ಗೆ ಏರಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ.
ದೆಹಲಿಯ ಹೊರತಾಗಿ, ಬೆಂಗಳೂರಿನಲ್ಲಿ 1,879 ರೂ., ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯೂ ಹೆಚ್ಚಾಗಿದೆ. ಇತ್ತೀಚಿನ ಏರಿಕೆಯೊಂದಿಗೆ, ಪ್ರತಿ ಚಿಲ್ಲರೆ ಸಿಲಿಂಡರ್‌ ಬೆಲೆ ಈಗ ಮುಂಬೈನಲ್ಲಿ ರೂ 1,754.50, ಚೆನ್ನೈನಲ್ಲಿ ರೂ 1,964.50 ಮತ್ತು ಕೋಲ್ಕತ್ತಾದಲ್ಲಿ ರೂ 1,911.50 ಆಗಿದೆ.

4 ತಿಂಗಳಲ್ಲಿ 156 ರೂ ಹೆಚ್ಚಳ
ಅಕ್ಟೋಬರ್ 1 ರಂದು, ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ದರವನ್ನು 48.50 ರೂ ಹೆಚ್ಚಿಸಿತ್ತು.
ಇದು 19-ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಸತತ ನಾಲ್ಕನೇ ತಿಂಗಳು ಏರಿಕೆಯಾಗಿದೆ.

ದೇಶದಲ್ಲಿ ಸತತ ನಾಲ್ಕನೇ ತಿಂಗಳಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ನಿರಂತರ ಏರಿಕೆಯಾಗಿದೆ. ಈ ಬಾರಿ 62 ರೂ.ಗಳಷ್ಟು ಏರಿಕೆಯಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಪ್ರತಿ ಸಿಲಿಂಡರ್‌ಗೆ ಸರಾಸರಿ 156 ರೂ.ಗಳಷ್ಟು ಏರಿಕೆಯಾಗಿದ್ದು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸಣ್ಣ ವ್ಯಾಪಾರಗಳ ಮೇಲೆ ಹೊರೆಯನ್ನು ಹೆಚ್ಚಿಸಿದೆ.
ಆದಾಗ್ಯೂ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಸ್ಥಿರವಾಗಿದೆ, ಅದರಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ.