• ನವದೆಹಲಿ: ಹೊಸ ಮಾದರಿಗಳ ಪರಿಚಯ ಮತ್ತು ಸರ್ಕಾರದ ಹಲವು ನೀತಿಗಳ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಮಾರಾಟ ಪ್ರಗತಿ ಸಾಧಿಸಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 19.7 ಲಕ್ಷಕ್ಕೆ (ಶೇ 17ರಷ್ಟು) ಏರಿಕೆಯಾಗಿದೆ ಎಂದು ಕೈಗಾರಿಕಾ ಸಂಸ್ಥೆ ಎಸ್‌ಐಎಎಂ ಮಂಗಳವಾರ ಹೇಳಿದೆ.

ಆರ್ಥಿಕ ವರ್ಷ 2023–24ರಲ್ಲಿ 16.8 ಲಕ್ಷ ಬ್ಯಾಟರಿ ವಾಹನಗಳು ಮಾರಾಟವಾಗಿದ್ದವು. 2024–25ರಲ್ಲಿ 19.7 ಲಕ್ಷ ವಾಹನಗಳು ಮಾರಾಟವಾಗಿವೆ. ಒಟ್ಟು ಶೇ 17ರಷ್ಟು ಪ್ರಗತಿ ಸಾಧಿಸಿದೆ ಎಂದು ಹೇಳಿದೆ. ನೋಂದಣಿ ಸಂಖ್ಯೆಯ ಪ್ರಗತಿ ಶೇ 18ರಷ್ಟು ಏರಿಕೆಯಾಗಿದೆ.

ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳ ನೋಂದಣಿಯು ಶೇ 21ರಷ್ಟು ಏರಿಕೆಯಾಗಿದೆ. ಒಟ್ಟು 11.5 ಲಕ್ಷ ವಾಹನಗಳು ಮಾರಾಟವಾಗಿದೆ. ತ್ರಿಚಕ್ರ ವಾಹನಗಳ ಮಾರಾಟ ಪ್ರಗತಿ ಶೇ 10.5ರಷ್ಟು ಹೆಚ್ಚಾಗಿದೆ. ಕಳೆದ ವರ್ಷ 7 ಲಕ್ಷ ವಾಹನಗಳು ಮಾರಾಟವಾಗಿದ್ದವು.

2024ರ ಏ. 1ರಿಂದ ಸೆ. 30ರವರೆಗೆ ಪ್ರಧಾನಮಂತ್ರಿ ಇ–ಡ್ರೈವ್‌, ಪ್ರಧಾನಮಂತ್ರಿ ಇ–ಬಸ್‌ ಸೇವಾ ಯೋಜನೆ ಒಳಗೊಂಡಂತೆ ಎಲೆಕ್ಟ್ರಿಕ್ ವಾಹನಗಳ ಸಂಚಾರ ಉತ್ತೇಜನ ಯೋಜನೆಯಡಿ ಹಲವು ಕಂಪನಿಗಳು ಹೊಸ ಉತ್ಪನ್ನಗಳನ್ನು ಹೊರತಂದ ಪರಿಣಾಮ, ಈ ಕ್ಷೇತ್ರ ಹೊಸ ಎತ್ತರಕ್ಕೆ ತಲುಪಿದೆ ಎಂದು ಎಸ್‌ಐಎಎಂ ಹೇಳಿದೆ.