ಬೆಳಗಾವಿ : ಖಾನಾಪುರ ತಾಲೂಕಿನಲ್ಲಿರುವ ಕುಂಬಾರರು ಕುಶಲಕರ್ಮಿಗಳು. ಇಲ್ಲಿಯ ಕುಂಬಾರರು ಉತ್ಪಾದಿಸುವ ಮಣ್ಣಿನ ಉತ್ಪನ್ನಗಳು ಮಹಾನಗರಗಳಿಗೆ ಸರಬರಾಜಾಗುತ್ತಿವೆ. ಪರಿಣಾಮ ಸ್ಥಳೀಯ ವೃತ್ತಿಪರ ಕುಂಬಾರರು ವಾರ್ಷಿಕ ಹತ್ತಾರು ಕೋಟಿ ವಹಿವಾಟು ನಡೆಸುವ ಮೂಲಕ ಸ್ಥಳೀಯವಾಗಿ ಉದ್ಯೋಗ ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ ಎಂದು ಶಾಸಕ ವಿಠ್ಠಲ ಹಲಗೇಕರ ಸಂತಸ ವ್ಯಕ್ತಪಡಿಸಿದರು.
ಖಾನಾಪುರ ಕುಂಬಾರಿಕೆ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಜರುಗಿದ ತರಬೇತಿ ಪಡೆದ ಕುಂಬಾರರಿಗೆ ವಿದ್ಯುತ್ ಚಾಲಿತ ಕುಂಬಾರಿಕೆ ಯಂತ್ರಗಳ ವಿತರಣೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಸ್ಥಳೀಯ ಕುಂಬಾರಿಕೆ ಸಂಸ್ಥೆಯಿಂದ ತರಬೇತಿ ಪಡೆದ ಫಲಾನುಭವಿಗಳಿಗೆ 360 ವಿದ್ಯುತ್ ಚಾಲಿತ ಕುಂಬಾರಿಕಾ ಯಂತ್ರಗಳನ್ನು ವಿತರಿಸಲಾಗುತ್ತಿದೆ, ಇದರ ಪೈಕಿ ಅರ್ಧದಷ್ಟು ಫಲಾನುಭವಿಗಳು
ಮಹಿಳೆಯರೇ ಆಗಿರುವುದು ವಿಶೇಷವಾಗಿದೆ ಎಂದರು.ನಿಗಮದ ಅಧ್ಯಕ್ಷ ಮನೋಜ್‌ಕುಮಾರ ಮಾತನಾಡಿ, ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ಖಾದಿ ಮತ್ತು ಗ್ರಾಮೋದ್ಯೋಗ ನಿಗಮದಿಂದ (ಕೆವಿಎಸಿ) ವಾರ್ಷಿಕ 10 ಲಕ್ಷ ಜನರಿಗೆ ಉದ್ಯೋಗ ಲಭಿಸುತ್ತಿದೆ. ನಿಗಮದಲ್ಲಿ ಲಕ್ಷ ಉದ್ಯೋಗಿಗಳಿದ್ದು, ಅವರಲ್ಲಿ ಶೇ.80ರಷ್ಟು ಮಹಿಳೆಯರಿದ್ದಾರೆ. ಕುಂಬಾರಿಕೆಯನ್ನು ಮುಖ್ಯ ಉದ್ಯೋಗವಾಗಿ ಕೈಗೊಂಡವರಿಗೆ ಕೆವಿಐಸಿಯಿಂದ ಆರ್ಥಿಕ ನೆರವು ಮತ್ತು ಸುಧಾರಿತ ಯಂತ್ರೋಪಕರಣ ಒದಗಿಸಲಾಗುತ್ತದೆ. ಇದುವರೆಗೂ ದೇಶಾದ್ಯಂತ 30 ಸಾವಿರಕ್ಕೂ ಅಧಿಕ ವಿದ್ಯುತ್ ಚಾಲಿತ ಕುಂಬಾರಿಕೆ ಯಂತ್ರ ವಿತರಿಸಲಾಗಿದೆ. ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತದ ಕರೆಯಿಂದಾಗಿ ಇಂದು ಕುಂಬಾರರ ಉತ್ಪನ್ನಗಳು ಮಹಾನಗರಗಳಲ್ಲಿ ಬಹುಬೇಡಿಕೆ ಪಡೆದಿವೆ. ಫೈವ್ ಸ್ಟಾರ್ ಹೋಟೆಲ್ ಕುಂಬಾರರ ಉತ್ಪನ್ನಗಳು ಅಲಂಕರಿಸುತ್ತಿವೆ. ನಿರುದ್ಯೋಗಿಗಳು ಕುಂಬಾರಿಕೆ ಹಾಗೂ ಇತರೆ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಸಾವಿರ ಕೋಟಿ ಸಾಲ ಸೌಲಭ್ಯ ಒದಗಿಸಿ ₹25 ಸಾವಿರ ಕೋಟಿ ಸಹಾಯಧನ
ನೀಡಲಾಗಿದೆ. ಗ್ರಾಮೀಣ ಭಾಗದ ಯುವಕರು, ಮಹಿಳೆಯರು ಕೆವಿಐಸಿ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್, ಕೆವಿಐಸಿ ದಕ್ಷಿಣ ಮಧ್ಯ ಭಾರತದ ಸಿಇಒ ಮದನಕುಮಾರ ರೆಡ್ಡಿ, ಖಾದಿ ಬೋರ್ಡ್ ಅಭಿವೃದ್ಧಿ ಅಧಿಕಾರಿ ಸಾವಿತ್ರಮ್ಮ ದಳವಾಯಿ, ಡಿಬಿಸಿ ಹುಬ್ಬಳ್ಳಿ ವಿಭಾಗ ದ ಪ್ರಮುಖ ಈ ಮೋಹನ ರೆಡ್ಡಿ, ಪ್ರಿಯಾ ಪುರಾಣಿಕ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಫಲಾನುಭವಿಗಳು, ಕುಂಬಾರ ಸಮಾಜದ ಮುಖಂಡರು ಇದ್ದರು. ಸಿವಿಪಿಐಪ್ರಾಚಾರ್ಯ ವಿಜಯೇಂದ್ರ ಸಿಂಗ್ ಸ್ವಾಗತಿಸಿದರು. ಎಸ್.ಎನ್ ದೇಶಪಾಂಡೆ ವಂದಿಸಿದರು.