ಬೆಳಗಾವಿ: ಉತ್ತರ ಕನ್ನಡದ ಜನ ಬುದ್ಧಿವಂತರಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಪ್ರತ್ಯೇಕ ಜಿಲ್ಲೆಗಾಗಿ ನಡೆಯುತ್ತಿರುವ ಹೋರಾಟದ ಸರಕಾರದ ಗಮನಕ್ಕಿದೆ. ಜೊತೆಗೆ ನೂತನವಾಗಿ ಕದಂಬ ಕನ್ನಡ ಜಿಲ್ಲೆ ರಚನೆಯ ಕುರಿತು ಸರಕಾರದ ಮುಖ್ಯಮಂತ್ರಿ, ಕಂದಾಯ ಸಚಿವರ ಗಮನಕ್ಕೆ ತರುವುದಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಸಚಿವ ಶಿವರಾಜ ತಂಗಡಗಿ ಹೇಳಿದರು.

ಅವರು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಸಂದರ್ಭದಲ್ಲಿ ಕದಂಬ ಕನ್ನಡ ಜಿಲ್ಲೆಯನ್ನು ಆಗ್ರಹಿಸಿ ನಡೆದ ಹೋರಾಟದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸೂಚನೆಯ ಮೇರೆಗೆ, ಸರ್ಕಾರದ ಮತ್ತು ಮುಖ್ಯಮಂತ್ರಿಗಳ ಪ್ರತಿನಿಧಿಗಳಾಗಿ ಸ್ಥಳಕ್ಕೆ ಆಗಮಿಸಿ ಮನವಿಯನ್ನು ಸ್ವೀಕರಿಸಿ ಮಾತನಾಡಿದರು. ನಿಮ್ಮ ಜಿಲ್ಲೆಗಾಗಿ ಇಷ್ಟೊಂದು ಜನ ದೂರದ ಬೆಳಗಾವಿಗೆ ಬಂದಿರುವುದು ನಮ್ಮ ಗಮನಕ್ಕಿದೆ. ಇದನ್ನು ಕೂಡಲೇ ಸಂಬಂಧಪಟ್ಟ ಸಚಿವರಿಗೆ ತಲುಪಿಸಲಾಗುವುದು ಎಂದರು.

ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದ ಯಲ್ಲಾಪುರ-ಮುಂಡಗೋಡು ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಯಾವುದೇ ಜಿಲ್ಲೆ ಪ್ರತ್ಯೇಕ ಆಗಬೇಕಾದರೆ ಒಂದೆರಡು ದಿನಗಳಲ್ಲಿ ಆಗಲಾರದು. ಸಾಕಷ್ಟು ವರ್ಷಗಳ ನಿರಂತರ ಹೋರಾಟ ಅಗತ್ಯ. ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ದೀರ್ಘ ಸಮಯದಿಂದ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆ ಸಾಕಷ್ಟು ವಿಶಾಲವಾಗಿದ್ದು, ವಿಸ್ತೀರ್ಣದಲ್ಲಿಯೂ ಸಹ ಬೆಳಗಾವಿಗಿಂತ ಉತ್ತರ ಕನ್ನಡ ದೊಡ್ಡದಾಗಿದೆ. ಎಲ್ಲ ತಾಲೂಕಿನಿಂದ ಪ್ರಬಲ ಜನಾಗ್ರಹ ರೂಪುಗೊಳ್ಳಬೇಕು. ಜಿಲ್ಲೆಯ ಸಾಹಿತಿಗಳು, ಪತ್ರಕರ್ತರು, ಬುದ್ಧಿಜೀವಿಗಳ ಸೇರಿದಂತೆ ಚಿಂತಕರು ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಚರ್ಚೆ ನಡೆಯಬೇಕು. ನಾನೂ ಸಹ ಸರಕಾರದ ಮಟ್ಟದಲ್ಲಿ ಗಮನ ಸೆಳೆಯವುದಾಗಿ ಹೇಳಿದರು.

ಅಧಿವೇಶನದ ಬಿಡುವಿನ ಸಮಯದಲ್ಲಿ ಪ್ರತಿಭಟನಾ ನಿರತ ಹೋರಾಟದ ಸ್ಥಳಕ್ಕೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಪ್ರತಿಭಟನಾ ನಿರತ ಹೋರಾಟಗಾರರ ಆಗ್ರಹವನ್ನು ಆಲಿಸಿದರು. ಮನವಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳ ಎಲ್ಲ ಶಾಸಕರು ಒಗ್ಗಟ್ಟಾಗಿ ಈ ನಿಟ್ಟಿನಲ್ಲಿ ಪ್ರಯತ್ನ ಪಡಬೇಕಿದೆ. ಸರಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳ, ಕಂದಾಯ ಮಂತ್ರಿಗಳ ಗಮನಕ್ಕೆ ಈ ವಿಷಯವನ್ನು ತರುವ ಕೆಲಸವನ್ನು ಮಾಡುತ್ತೇನೆ. ಮತ್ತು ಅಧಿವೇಶನದಲ್ಲಿ ಕದಂಬ ಕನ್ನಡ ಜಿಲ್ಲೆಯನ್ನಾಗಿ, ಬನವಾಸಿ ಮತ್ತು ತಾಲೂಕು ಗೋಕರ್ಣವನ್ನು ನೂತನ ತಾಲೂಕುಗಳನ್ನಾಗಿ ಘೋಷಣೆ ಮಾಡುವಂತೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ಹೇಳಿದರು.

ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ನಮ್ಮೂರಿಂದ 200 ಕಿ.ಮೀ. ದೂರವಿರುವ ಬೆಳಗಾವಿಗೆ ಸ್ವಯಂಪ್ರೇರಿತವಾಗಿ ಬಂದಿರುವ ಎಲ್ಲ ಕದಂಬ ಕನ್ನಡ ಸೇನಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇದು ಕೇವಲ ಆರಂಭವಷ್ಟೇ. ಪ್ರತಿ ಪಂಚಾಯತ ಮಟ್ಟದಲ್ಲಿ ನಮ್ಮ ಹೋರಾಟ ಸಂಘಟಿತಗೊಳ್ಳುವುದರ ಜೊತೆಗೆ ಸಹಿ ಸಂಗ್ರಹಣೆ ಅಭಿಯಾನ, ರಥಯಾತ್ರೆಗಳು ಎಲ್ಲ ತಾಲೂಕಿನಾದ್ಯಂತ ನಡೆಯಲಿದೆ ಎಂದರು. ಘಟ್ಟದ ಮೇಲಿನ ಎಲ್ಲ ತಾಲೂಕಿನ ಜನರನ್ನು ಸಂಘಟಿಸಿ, ಹೋರಾಟದ ತೀವ್ರತೆ ಹೆಚ್ಚಿಸಲಾಗುವುದು. ಸದ್ಯದಲ್ಲಿಯೇ ಸಮಿತಿ ವತಿಯಿಂದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದರು.

ಪ್ರತಿಭಟನೆ ನಿರತ ಸ್ಥಳಕ್ಕೆ ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ಆಗಮಿಸಿ, ಮನವಿ ಸ್ವೀಕರಿಸಿ ಮಾತನಾಡಿ, ರಾಮಕೃಷ್ಣ ಹೆಗಡೆಯಂತಹ ಮೇರು ಮುಖ್ಯಮಂತ್ರಿಯನ್ನು ನೀಡಿದ ಜಿಲ್ಲೆ ನಿಮ್ಮದಾಗಿದೆ. ನಾನೂ ಸಹ ರಾಮಕೃಷ್ಣ ಹೆಗಡೆಯವರ ಶಿಷ್ಯ. ನಿಮ್ಮ ಮನವಿಗೆ ನಾನೂ ಕೈಜೋಡಿಸುತ್ತೇನೆ ಎಂದರು.

ಪ್ರತ್ಯೇಕ ಕದಂಬ ಕನ್ನಡ ಜಿಲ್ಲೆ ಮತ್ತು ಬನವಾಸಿ ತಾಲೂಕು ರಚನೆಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದ ಸಮಯದಲ್ಲಿ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ 500 ಕ್ಕೂ ಅಧಿಕ ಜನರು ಬೆಳಗಾವಿಯಲ್ಲಿ ಕದಂಬ ಕನ್ನಡ ಜಿಲ್ಲೆಗಾಗಿ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿದ್ದು, ಶಿರಸಿ, ಸಿದ್ದಾಪುರ, ಮುಂಡಗೋಡು, ಬನವಾಸಿ, ಯಲ್ಲಾಪುರ, ದಾಂಡೇಲಿ, ಹಳಿಯಾಳ ಸೇರಿದಂತೆ ಎಲ್ಲ ತಾಲೂಕೂಗಳಿಂದ ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಜೊತೆಗೆ ಅನೇಕ ರಾಜಕೀಯ ನಾಯಕರೂ ಸಹ ಕೈಜೋಡಿಸಿದ್ದಾರೆ. ಪ್ರತಿಭಟನೆಯಲ್ಲಿ ಮಹಿಳೆಯರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಪ್ರತಿಭಟನೆಯಲ್ಲಿ ಹೋರಾಟದ ಪ್ರಮುಖರಾದ ಎಸ್.ಫಕೀರಪ್ಪ ಮುಂಡಗೋಡು, ಜಯಶೀಲ ಗೌಡ, ಮುಂಡಗೋಡಿನ ಚಿದಾನಂದ ಹರಿಜನ, ಮಂಜುನಾಥ ಪಾಟೀಲ್, ಹಾಲಪ್ಪ ಜಕ್ಕಣ್ಣನವರ್, ಅನಿಲ ನಾಯಕ ಶಿರಸಿ, ಅನಿಲ ಕರಿ, ಕಿರಣ ಮುಂಡಗೋಡು, ಸಲ್ಮಾ ಮುಂಡಗೋಡು, ಸಂತೋಷ ನಾಯ್ಕ ಬ್ಯಾಗದ್ದೆ, ರಂಗಣ್ಣ ದಾಸನಕೊಪ್ಪ, ಅಚ್ನಳ್ಳಿಯ ವಿರೇಂದ್ರ ಗೌಡರ್, ಶಿವಾನಂದ ದೇಶಳ್ಳಿ, ಹಾಲಪ್ಪ ಜಕ್ಕಣ್ಣನವರ್, ಮಂಜುನಾಥ ಪಾಟೀಲ್ ಸೇರಿದಂತೆ ಇನ್ನಿತರ ಪ್ರಮುಖರು ಮಾತನಾಡಿದರು.

 

ಇದು ಆರಂಭದ ಹೆಜ್ಜೆಯಷ್ಟೇ. ಇನ್ನು ಮುಂದಿನ ದಿನದಲ್ಲಿ ನಮ್ಮ ಹೋರಾಟ ತೀವ್ರಗೊಳ್ಳಲಿದೆ. ಎಲ್ಲ ತಾಲೂಕಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಹೋರಾಟವನ್ನು ಗ್ರಾಮ ಮಟ್ಟದಲ್ಲಿ ಸಂಘಟಿಸಲಾಗುವುದು. – ಅನಂತಮೂರ್ತಿ ಹೆಗಡೆ, ಅಧ್ಯಕ್ಷರು – ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್

ಉತ್ತರ ಕನ್ನಡದ ಜನ ಬುದ್ಧಿವಂತರಿದ್ದಾರೆ. ಅವರ ಪ್ರತ್ಯೇಕ ಜಿಲ್ಲೆಯ ಹೋರಾಟವನ್ನು ಸರಕಾರಕ್ಕೆ ಕೂಡಲೇ ಮುಟ್ಟಿಸಲಾಗುವುದು – ಶಿವರಾಜ ತಂಗಡಗಿ, ಸಚಿವರು

ಪ್ರತ್ಯೇಕ ಜಿಲ್ಲೆಯ ಕೂಗಿಗೆ ನನ್ನ ಬೆಂಬಲವೂ ಇದೆ. ಜಿಲ್ಲೆಯ ಎಲ್ಲ ಸಾಹಿತಿ, ಬುದ್ಧಿಜೀವಿಗಳು, ಜನತೆಯ ನಡುವೆ ಚರ್ಚೆ ನಡೆಯಲಿ. ನಾನೂ ದನಿಗೂಡಿಸುತ್ತೇನೆ. – ಶಿವರಾಮ್ ಹೆಬ್ಬಾರ್ – ಶಾಸಕ

ಬೆಳಗಾವಿಯ ಅಧಿವೇಶನದಲ್ಲಿ ಕದಂಬ ಕನ್ನಡ ಪ್ರತ್ಯೇಕ ಜಿಲ್ಲೆ ಮತ್ತು ಬನವಾಸಿ, ಗೋಕರ್ಣ ತಾಲೂಕಿನ ರಚನೆಗಾಗಿ ಸದನದಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ. – ಭೀಮಣ್ಣ ನಾಯ್ಕ – ಶಾಸಕ