ದುಬೈ : ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಭಾರತ ತಂಡವು ಫೈನಲ್ ತಲುಪಿದೆ. ಭಾರತ ಚಾಂಪಿಯನ್ಸ್ ಟ್ರೋಫಿ-2025ರ ಫೈನಲ್ ಪ್ರವೇಶಿಸಿದೆ. ಐಸಿಸಿ ಈವೆಂಟ್‌ಗಳಲ್ಲಿ ಅಜೇಯ ಶಕ್ತಿಯಾಗಿ ಬೆಳೆದಿದ್ದ ಆಸ್ಟ್ರೇಲಿಯಾ ತಂಡವು ಹೀನಾಯವಾಗಿ ಸೋತಿದೆ.

ವಿರಾಟ್ ಕೊಹ್ಲಿ ಅವರ ಸಮಯೋಚಿತ
ಅರ್ಧಶತಕದ (84) ನೆರವಿನಿಂದ ಭಾರತ ತಂಡವು ಇಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ನಾಲ್ಕು ವಿಕೆಟ್ ಅಂತರದ ಜಯ ಗಳಿಸಿದ್ದು, ಫೈನಲ್‌ಗೆ ಪ್ರವೇಶಿಸಿದೆ.

ಆ ಮೂಲಕ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಐದನೇ ಸಲ ಫೈನಲ್‌ಗೆ ಲಗ್ಗೆ ಇಟ್ಟಿದೆ. 2002 ಹಾಗೂ 2013ನೇ ಸಾಲಿನಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದ್ದರೆ 2000 ಹಾಗೂ 2017ರಲ್ಲಿ ರನ್ನರ್-ಅಪ್ ಎನಿಸಿಕೊಂಡಿತ್ತು. ಈ ಪೈಕಿ ಸತತ ಎರಡನೇ ಸಲ ಫೈನಲ್‌ಗೇರಿದ ಸಾಧನೆ ಮಾಡಿದೆ.

ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ನಾಯಕ ಸ್ಟೀವ್ ಸ್ಮಿತ್ (73) ಹಾಗೂ ಅಲೆಕ್ಸ್ ಕ್ಯಾರಿ (61) ಅರ್ಧಶತಕಗಳ ಹೊರತಾಗಿಯೂ 49.3 ಓವರ್‌ಗಳಲ್ಲಿ 264 ರನ್‌ಗಳಿಗೆ ಆಲೌಟ್ ಆಯಿತು.

ಈ ಗುರಿ ಬೆನ್ನಟ್ಟಿದ ಭಾರತ, ಚೇಸ್ ಮಾಸ್ಟ‌ರ್ ಖ್ಯಾತಿಯ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ನೆರವಿನಿಂದ 48.1 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಶ್ರೇಯಸ್ ಅಯ್ಯರ್ (45), ಕೆ.ಎಲ್. ರಾಹುಲ್ (42*), ನಾಯಕ ರೋಹಿತ್ ಶರ್ಮಾ (28), ಅಕ್ಷರ್ ಪಟೇಲ್‌ (27) ಹಾಗೂ ಹಾರ್ದಿಕ್ ಪಾಂಡ್ಯ (8) ಸಹ ಉಪಯುಕ್ತ ಇನಿಂಗ್ಸ್ ಕಟ್ಟಿದರು.

ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ 98 ಎಸೆತಗಳಲ್ಲಿ ಐದು ಬೌಂಡರಿಗಳ ನೆರವಿನಿಂದ 84 ರನ್ ಗಳಿಸಿದರು. ಆದರೆ ಗೆಲವಿನ ಸನಿಹದಲ್ಲಿ ಔಟ್ ಆಗಿ ಶತಕ ಗಳಿಸುವ ಅವಕಾಶದಿಂದ ವಂಚಿತರಾದರು.

ಆಸ್ಟ್ರೇಲಿಯಾದ ಪರ ಆ್ಯಡಂ ಜಂಪಾ ಹಾಗೂ ನೇಥನ್ ಎಲ್ಲಿಸ್ ತಲಾ ಎರಡು ವಿಕೆಟ್ ಗಳಿಸಿದರು.

(ಮಾ.5) ಲಾಹೋರ್‌ನಲ್ಲಿ ನಡೆಯಲಿರುವ ದ್ವಿತೀಯ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದ ತಂಡವು ಭಾನುವಾರ (ಮಾ.9) ದುಬೈನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಟ್ರೋಫಿಗಾಗಿ ಭಾರತ ತಂಡದ ವಿರುದ್ಧ ಸೆಣಸಲಿದೆ.