ಬೆಳಗಾವಿ : ಬೆಳಗಾವಿಯಲ್ಲಿ ನಡೆಯುತ್ತಿರುವ 39ನೇ ಕಾಂಗ್ರೆಸ್ ಅಧಿವೇಶನದ ಸವಿನೆನಪಿನ ಶತಮಾನೋತ್ಸವದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಹೊರತಂದಿರುವ ಭಾರತದ ನಕಾಶೆ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಆ ದೇಶಕ್ಕೆ ಧಾರೆ ಎರೆದು ಕೊಟ್ಟಿದೆ ಎಂದು ಬಿಜೆಪಿ ಆರೋಪ ಮಾಡಿದೆ. ಗಾಂಧಿ ಭಾರತ ಹೆಸರಿನಲ್ಲಿ ಭಾರತದ ನಕಾಶೆಯನ್ನು ಕಾಂಗ್ರೆಸ್ಸಿಗರು ತಿರುಚಿರುವುದು ನಿಜಕ್ಕೂ ದೇಶ ದ್ರೋಹ. ವೈಯಕ್ತಿಕ ಸ್ವಾರ್ಥ ಸಾಧನೆಗಾಗಿ ಕಾಂಗ್ರೆಸ್ ಎಂತಹ ಹೀನ ಕೆಲಸಕ್ಕೆ ಆದರೂ ಸಿದ್ದ ಎಂಬುದಕ್ಕೆ ಬೆಳಗಾವಿಯಲ್ಲಿ ಹಾಕಿಸಿರುವ ಬ್ಯಾನರ್ ಗಳೇ ಸಾಕ್ಷಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಕೂಡಲೇ ವಿವಾದಿತ ಬ್ಯಾನರ್ ಗಳನ್ನು ತೆರವುಗೊಳಿಸಿ ಭಾರತದ ನಕಾಶೆಯನ್ನು ತಿರುಚಿದ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಿ ಬಿಜೆಪಿ ಒತ್ತಾಯಿಸಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪೋಸ್ಟ್ ಮಾಡಿ, ಭಾರತದ ಮುಕುಟಮಣಿ, ಭಾರತದ ಹಮ್ಮೆ ಕಾಶ್ಮೀರದಲ್ಲಿ ಶಾಂತಿಯನ್ನು ಪಸರಿಸಿ, ಲಕ್ಷಾಂತರ ಜನ ಪ್ರವಾಸಿಗರ ಆಕರ್ಷಣೀಯ ಪ್ರದೇಶವನ್ನಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಭವ್ಯ ಭಾರತ ಸೃಷ್ಟಿಸಿದ್ದಾರೆ. ಆದರೆ, ಗಾಂಧಿ ಭಾರತದ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ, ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶವನ್ನು ಪಾಕಿಸ್ತಾನಕ್ಕೆ ಧಾರೆ ಎರೆದು, ಭಾರತದ ನಕಾಶೆಯನ್ನು ತಿರುಚಿರುವುದು ದೇಶದ್ರೋಹ.ಕೈಯಲ್ಲಿ ಸಂವಿಧಾನ ಹಿಡಿದು ಓಡಾಡುವ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯೇ ದೇಶದ್ರೋಹದ ಕೃತ್ಯ. ದೇಶದ ಜನ ಕಾಂಗ್ರೆಸ್ ಪಕ್ಷದ ಇಂತಹ ನಿಲುವುಗಳನ್ನು ಎಂದಿಂಗೂ ಸ್ವೀಕರಿಸುವುದಿಲ್ಲ. ನಾಚಿಕೆ ಲಜ್ಜೆಯನ್ನು ಬಿಟ್ಟ ಕಾಂಗ್ರೆಸ್ ಪಕ್ಷಕ್ಕೆ ಜನರೇ ಉತ್ತರ ನೀಡುತ್ತಾರೆಂದು ಹೇಳಿದ್ದಾರೆ.
ಭಾರತದ ನಕಾಶೆಯನ್ನೇ ಬದಲಿಸಿದ ದೇಶದ್ರೋಹಿ ಇಟಲಿ ಕಾಂಗ್ರೆಸ್: JDS ಅಕ್ರೋಶ
ಜೆಡಿಎಸ್ ಕೂಡ ಕಿಡಿಕಾರಿದ್ದು, ಬೆಳಗಾವಿಯಲ್ಲಿ “ಗಾಂಧಿ ಭಾರತ” ಹೆಸರಿನಲ್ಲಿ ಹಾಕಿಸಿರುವ ಭಾರತದ ನಕ್ಷೆಯಲ್ಲಿ ಕಾಶ್ಮೀರ ಭೂಭಾಗವನ್ನೇ ಕೈಬಿಟ್ಟಿದೆ ಇಟಲಿ ಕಾಂಗ್ರೆಸ್. ಭಾರತದ ನಕ್ಷೆಯನ್ನು ತಿರುಚುವುದು, ಮಾರ್ಪಾಡು ಮಾಡುವುದು ದೇಶದ್ರೋಹದಂತಹ ಗಂಭೀರ ಅಪರಾಧಿ ಕೃತ್ಯ. ಕಾಂಗ್ರೆಸ್ ಸಮಾವೇಶದ ನೇತೃತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಇದಕ್ಕೆ ನೇರಹೊಣೆಗಾರರು ಎಂದು ಹೇಳಿದೆ.
ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಆದರೆ ವೋಟಿಗಾಗಿ ಓಲೈಕೆ ರಾಜಕಾರಣ ಮಾಡುತ್ತ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸುವ ಕಾಂಗ್ರೆಸ್ ದೇಶದ್ರೋಹದ ಮನಸ್ಥಿತಿ ಬ್ಯಾನರ್ ಗಳಿಂದ ಜಗಜ್ಜಾಹೀರಾಗಿದೆ ಎಂದು ತಿಳಿಸಿದೆ.