ಮೂಡಲಗಿ – ಭಾರತದ ಧಾರ್ಮಿಕ ಪರಂಪರೆಗೆ ಇರುವಂಥ ಇತಿಹಾಸ ಯಾವ ಜಗತ್ತಿಗೂ ಇಲ್ಲ ಅದನ್ನು ನಾಶ ಮಾಡಲು ಯಾರಿಂದಲೂ ಆಗಿಲ್ಲ. ಯಾಕೆಂದರೆ ಸಾಧು ಸಂತರು ಬರೆದಿಟ್ಟಂಥ ಶಾಸ್ತ್ರವನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ. ಮಠ ಮಂದಿರಗಳೂ ಕೂಡ ಸಂತರ ಆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಇಂದಿಗೂ ನಡೆದಿದೆ.

ಈ ನಿಟ್ಟಿನಲ್ಲಿ ಶಿವಾಪೂರದ ಶ್ರೀ ಅಡವಿ ಸಿದ್ದೇಶ್ವರ ಮಠ ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು.

ತಾಲೂಕಿನ ಶಿವಾಪೂರ(ಹ) ಗ್ರಾಮದಲ್ಲಿ ಶುಕ್ರವಾರ ನಡೆದ ಅಂಬಲಿ ಒಡೆಯ ಶ್ರೀ ಅಡವಿ ಸಿದ್ದೇಶ್ವರ ಜಾತ್ರೆಯ ಪ್ರವಚನ ಮಹಾಮಂಗಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂಥ ಜಾತ್ರೆಗಳು ನಿರಂತರ ನಡೆಯಲಿ, ಗುರುವಿನ ಆಶೀರ್ವಾದ ಎಲ್ಲ ಭಕ್ತರ ಮೇಲೆ ಇರಲಿ. ಇಂಥ ಮಠಗಳಿಂದ ಪ್ರೇರಿತರಾಗಿ ನಾವು ಧಾರ್ಮಿಕ ಕಾರ್ಯಗಳಲ್ಲಿ ತೊಡಗುವುದು ಸಾಧ್ಯವಾಗುತ್ತದೆ. ಮನುಷ್ಯನಲ್ಲಿ ಸಾತ್ವಿಕ ಗುಣಗಳು ಬರಬೇಕಾದರೆ ಇಂಥ ಜಾತ್ರೆ ನಡೆಯಬೇಕು ಎಂದರು.

ಸಾನಿಧ್ಯವಹಿಸಿದ್ದ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯ ಮೃತ್ಯುಂಜಯ ಮಹಾಸ್ವಾಮೀಜಿ ಮಾತನಾಡಿ, ಹನ್ನೆರಡನೇ ಶತಮಾನದ ಶರಣರ ಹಾಗೆ ಇವತ್ತಿಗೂ ಶರಣರಂತೆ ಬದುಕಿದವರೆಂದರೆ ಅಂಕಲಗಿಯ ಅಡವಿ ಸಿದ್ದೇಶ್ವರರು. ರಾಜ್ಯದಲ್ಲಿ ಒಟ್ಟು ಮೂರು ಶಿವಾಪೂರಗಳಿವೆ. ಒಂದು ಮಂಡ್ಯ ಜಿಲ್ಲೆಯ ಶಿವಪುರ, ಎರಡನೇಯದು ಉಳವಿಯ ಶಿವಪುರ ಹಾಗೂ ಮೂರನೇಯದು ಇದೇ ಮೂಡಲಗಿಯ ಶಿವಪುರ ಇವುಗಳು ಆಧ್ಯಾತ್ಮಿಕ ಸಾಧನೆಗೆ ಪ್ರಸಿದ್ಧವಾಗಿವೆ. ಇಲ್ಲಿನ ಅಡವಿ ಸಿದ್ಧರಾಮ ಶ್ರೀಗಳು ಎಲ್ಲರಿಗೂ ಬಸವ ದರ್ಶನ ಮಾಡಿಸಿದ್ದಾರೆ. ಇಂಥ ಧಾರ್ಮಿಕ ಸ್ವಾತಂತ್ರ್ಯ ನೀಡಿದವರೆಂದರೆ ಹನ್ನೆರಡನೇ ಶತಮಾನದ ಬಸವಾದಿ ಶರಣರು ಎಂದು ಹೇಳಿ, ಶ್ರೀ ಬಸವಣ್ಣನವರ ಕಾಯಕದ ಹಾಗೂ ಶರಣ ತತ್ವದ ಮಹತ್ವ ವಿವರಿಸಿದರು.

ಶಿವಾಪೂರ ತಾಯಂದಿರು ಬುತ್ತಿ ಕಟ್ಟಿಕೊಂಡು ಈ ಜಾತ್ರೆಯಲ್ಲಿ ಭಾಗವಹಿಸಿದ್ದಿರಿ, ನಾವು ನಿಜವಾದ ಹಳ್ಳಿಯ ಸಂಸ್ಕೃತಿಯನ್ನು ಕಂಡಂತಾಯಿತು. ಇಂಥ ಗ್ರಾಮೀಣ ಜಾತ್ರೆ ಮುಂದಿನ ವರ್ಷ ಇನ್ನೂ ಹೆಚ್ಚಿನ ವೈಭವದಿಂದ ನಡೆಯಬೇಕು ಎಂದರು.

ಈ ಮುಂಚೆ ಶಿವಾಪುರ ಶ್ರೀ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ಧರಾಮ ಮಹಾಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರೂ ಒಂದಾಗಿ, ಒಕ್ಕಟಿನಿಂದ ಅಜ್ಜನ ಜಾತ್ರೆಯನ್ನು ವಿಜ್ರಂಭನೆಯಿಂದ ಆಚರಿಸುತ್ತಿರುವುದು ಖುಷಿ ಸಂಗತಿ ಎಂದರು.ಶಿವಾಪುರ ಹಾಗೂ ಸುತ್ತಮುತ್ತಲಿನ ಭಕ್ತರು ಶ್ರಾವಣ ಮಾಸದಲ್ಲಿ ಪ್ರವಚನ ಕೇಳಿದ್ದಿರೀ ಆ ಅಡವಿಸಿದ್ದೇಶ ಮಳೆ ಬೆಳೆ ಚೆನ್ನಾಗಿ ಕೊಟ್ಟು ತಮ್ಮ ಜೀವನ ಸುಖಮಯಗೊಳಿಸಲಿ ಎಂದರು.

ಸಮಾರಂಭದಲ್ಲಿ ಟ್ರ್ಯಾಕ್ಟರ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸತ್ಕಾರ ಮಾಡಿ ಬಹುಮಾನ ನೀಡಲಾಯಿತು.

ಬಸವ ಬುತ್ತಿ:ಪವಾಡ ಪುರುಷ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದ ಶ್ರೀ ಮಹಾದೇವ ದೇವಸ್ಥಾನದಿಂದ ಅಡವಿಸಿದ್ದೇಶ್ವರ ದೇವಸ್ಥಾನದವರೆಗೆ ಹೊರಡುವ ಶ್ರೀ ಬಸವ ಬುತ್ತಿ ಕಾರ್ಯಕ್ರಮಕ್ಕೆ ಶ್ರೀ ಮಠದ ಪೀಠಾಧಿಪತಿಗಳಾದ ಅಡವಿಸಿದ್ದರಾಮ ಮಹಾಸ್ವಾಮಿಗಳು ಚಾಲನೆ ನೀಡಿದರು.

ಗ್ರಾಮದ ಸಹಸ್ರಾರು ಹೆಣ್ಣುಮಕ್ಕಳು ರೊಟ್ಟಿ ಬುತ್ತಿಯನ್ನು ಹೊತ್ತುಕೊಂಡು ವಿವಿಧ ವಾಧ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಅಡವಿಸಿದ್ದೇಶ್ವರ ಮಠಕ್ಕೆ ಬಂದು ತಲುಪಿತು. ಶ್ರೀ ದತ್ತಾಯಬೋಧ ಮಹಾಸ್ವಾಮಿಗಳು ಇದ್ದರು.

ಜಾತ್ರೆಯಲ್ಲಿ ಪಂಚಾಕ್ಷರಿ ಶಾಸ್ತ್ರಿಗಳು ಪ್ರತಿದಿನ ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟರು.

ವೇದಿಕೆಯ ಮೇಲೆ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ನಿಡಗುಂದಿ, ಶ್ರೀ ಚಂದ್ರಶೇಖರ ಸ್ವಾಮೀಜಿ ಗದಗ, ಕಂಕಣವಾಡಿಯ ಮಾರುತಿ ಶರಣರು,ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಜಿ ಢವಳೇಶ್ವರ,ಪಂಚಮಸಾಲಿ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಫಿರೋಜಿ ಅತಿಥಿಗಳಾಗಿ ಭಾಗವಹಿಸಿದ್ದರು.

ಪ್ರಮುಖರಾದ ತಾ.ಪಂ ಮಾಜಿ ಸದಸ್ಯ ಕೆಂಪಣ್ಣ ಮುಧೋಳ,ಬಸವರಾಜ ಸಾಯನ್ನವರ,ಸತೀಶ ಜುಂಜರವಾರ,ಶಿವಬಸು ಜುಂಜರವಾಡ,ಭೀಮಗೌಡ ಪಾಟೀಲ,ಮಹಾಂತೇಶ ಕುಡಚಿ,ಲಕ್ಕಪ್ಪ ಕಬ್ಬೂರ,ಬಸಪ್ಪ ಶೀಳನ್ನವರ ಸೇರಿದಂತೆ ಅನೇಕ ಗ್ರಾಮದ ಹಿರಿಯರು,ಶ್ರೀ ಮಠದ ಭಕ್ತರು ಉಪಸ್ಥಿತರಿದ್ದರು.