ಬೆಳಗಾವಿ :
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗಣಿತ ವಿಭಾಗದಿಂದ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಯಿತು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ಎಸ್. ತೇರದಾಳ ಅವರು ಗಣಿತತಜ್ಞ ಶ್ರೀನಿವಾಸ ರಾಮಾನುಜನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗಣಿತಶಾಸ್ತ್ರಕ್ಕೆ ವಿಶೇಷವಾದ ಮನ್ನಣೆಯಿತ್ತು. ಅವರಲ್ಲಿ ಆರ್ಯಭಟ, ಬ್ರಹ್ಮಗುಪ್ತ, ವರಹಮೀರರು ಅನನ್ಯವಾದ ಕೊಡುಗೆಗಳನ್ನು ನೀಡಿದ್ದಾರೆ. ಜಗತ್ತಿನ ಶ್ರೇಷ್ಠ ಗಣಿತತಜ್ಞರಲ್ಲಿ ಶ್ರೀನಿವಾಸ ರಾಮಾನುಜನ್ ಅವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಗಣಿತ ಶಾಸ್ತ್ರಕ್ಕೆ ಅವರ ಕೊಡುಗೆ ಅಪಾರವಾದದ್ದು. ಅವರು ತಮ್ಮ ಬೌದ್ಧಿಕ ಸಂಪತ್ತಿನ ಮೂಲಕ ಜಗತ್ತಿನ ಗಣಿತಲೋಕದಲ್ಲಿ ಭಾರತದ ಸ್ಥಾನವನ್ನು ಅಜರಾಮರವಾಗಿ ಉಳಿಸಿದರು. ವಿದ್ಯಾರ್ಥಿಗಳಿಗೆ ಶ್ರೀನಿವಾಸ ರಾಮಾನುಜನ್ ಅವರ ವ್ಯಕ್ತಿತ್ವ ಸದಾ ಮಾದರಿಯಾಗಿರುವುದು ಎಂದರು.

ಗಣಿತ ವಿಭಾಗದ ಮುಖ್ಯಸ್ಥ ಆದಿನಾಥ ಉಪಾಧ್ಯೆ ಮಾತನಾಡಿ, ಶ್ರೀನಿವಾಸ ರಾಮಾನುಜನ್ ಅವರು ಚಿಕ್ಕ ವಯಸ್ಸಿನಲ್ಲೇ ಗಣಿತದ ಬಗೆಗೆ ವಿಶೇಷ ಆಸಕ್ತಿಯುಳ್ಳವರಾಗಿದ್ದರು. ಚಿಹ್ನೆ ಮತ್ತು ಭಿನ್ನರಾಶಿಗಳು, ಅನಂತ ಸರಣಿ, ಸಂಖ್ಯೆ ಸಿದ್ಧಾಂತ, ಗಣಿತ ವಿಶ್ಲೇಷಣೆಗೆ ಸಂಬಂಧಿಸಿದ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಇವರ ಜನ್ಮದಿನವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸುತ್ತಿರುವುದು ತುಂಬಾ ಅರ್ಥಪೂರ್ಣವಾಗಿದೆ ಎಂದರು.
ಉಪನ್ಯಾಸಕಿ ಗೌರಮ್ಮ ಇಂಗಳಗಿ ನಿರೂಪಿಸಿದರು. ಡಾ. ಲಲಿತಾ ಲಮಾಣಿ ವಂದಿಸಿದರು. ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.