ಉಡುಪಿ:
ಕೇಂದ್ರ ಸರ್ಕಾರದ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಸಮಗ್ರ ಅಭಿವೃದ್ಧಿಗೆ ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣ ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹರ್ಷ ವ್ಯಕ್ತಪಡಿಸಿದ್ದಾರೆ. ತಮ್ಮ ಮನವಿ ಪುರಸ್ಕರಿಸಿ ಉಡುಪಿ ರೈಲು ನಿಲ್ದಾಣವನ್ನು ಈ ಯೋಜನೆಯಡಿ ಆಯ್ಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ಸಚಿವೆ ಹೇಳಿದ್ದಾರೆ.
ಉಡುಪಿ ರೈಲ್ವೆ ನಿಲ್ದಾಣವನ್ನು ಸಂಪೂರ್ಣ ಆಧುನೀಕರಿಸಿ, ವಿಶ್ವ ದರ್ಜೆಯ ಪ್ರಯಾಣ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಇದರಿಂದ ಶಿಕ್ಷಣ ಕೇಂದ್ರ ಮಣಿಪಾಲ, ಧಾರ್ಮಿಕ ಕೇಂದ್ರ ಉಡುಪಿಗೆ ಆಗಮಿಸುವವರಿಗೆ ಮತ್ತು ಬಂದರು ನಗರಿ ಮಲ್ಪೆಯ ಆರ್ಥಿಕ ವ್ಯವಹಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಕಾಮಗಾರಿಗಳನ್ನು ಶೀಘ್ರ ಆರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದ್ದಾರೆ.
ಯಶ್ಪಾಲ್ ಸ್ವಾಗತ: ಕೇಂದ್ರ ಸರ್ಕಾರ ಇಂದ್ರಾಳಿ ರೈಲು ನಿಲ್ದಾಣವನ್ನು ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ಆಯ್ಕೆ ಮಾಡಿರುವುದನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸ್ವಾಗತಿಸಿದ್ದಾರೆ. ಇದು ವೇಗವಾಗಿ ಬೆಳೆಯುತ್ತಿರುವ ಉಡುಪಿಯ ಅಭಿವೃದ್ಧಿಗೆ ವಿಶೇಷ ಕೊಡುಗೆಯಾಗಲಿದೆ. ಪ್ರಧಾನಿ ಮೋದಿ, ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.