ನವದೆಹಲಿ: ಪ್ಯಾಕಿಂಗ್‌ ಮಾಡಿದ ಆಹಾರ ಪದಾರ್ಥಗಳಲ್ಲಿ ಇರುವ ಪೋಷಕಾಂಶಗಳ ಪ್ರಮಾಣ ಕುರಿತ ಮಾಹಿತಿಯನ್ನು ದಪ್ಪ ಅಕ್ಷರಗಳಲ್ಲಿ ಮುದ್ರಿಸುವುದಕ್ಕೆ ಸಂಬಂಧಿಸಿದಂತೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಕರಡು ಅಧಿಸೂಚನೆ ಪ್ರಕಟಿಸಿದೆ.ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳು 2020ಕ್ಕೆ ತಿದ್ದುಪಡಿ ತರುವ ನಿರ್ಧಾರವನ್ನು ಪ್ರಾಧಿಕಾರದ 44ನೇ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಗ್ರಾಹಕರು ಸೇವಿಸುವ ಆಹಾರದಲ್ಲಿನ ಪೌಷ್ಠಿಕಾಂಶದ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಹಾಗೂ ಆರೋಗ್ಯಕರ ನಿರ್ಧಾರಗಳನ್ನು ಕೈಗೊಳ್ಳಲು ನೆರವು ನೀಡುವ ಉದ್ದೇಶ ಇದು ಹೊಂದಿದೆ ಎಂದು ಸಚಿವಾಲಯ ಹೇಳಿದೆ.ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಹೆಚ್ಚಿನ ಸೇವನೆಯು ಹಲವು ರೋಗಗಳಿಗೆ ಕಾರಣವಾಗುತ್ತಿರುವುದರಿಂದ ಇಂತಹ ಆಹಾರ ಪದಾರ್ಥಗಳ ಸೇವನೆ ನಿಯಂತ್ರಿಸಬೇಕೆಂಬುದು ಪೌಷ್ಠಿಕಾಂಶ ತಜ್ಞರ ಅಭಿಪ್ರಾಯವಾಗಿದೆ. ಹೀಗಾಗಿ ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸಲು ಹೊಸ ನಿಯಮ ಪೂರಕವಾಗಲಿದೆ ಎಂದು ಹೇಳಿದೆ.ಗ್ರಾಹಕರು ತಾವು ಬಳಸುವ ಆಹಾರದ ಪೊಟ್ಟಣಗಳಲ್ಲಿ ಇರುವ ಪೋಷಕಾಂಶಗಳ ಮೌಲ್ಯದ ಬಗ್ಗೆ ತಿಳಿದುಕೊಳ್ಳಬೇಕು. ಈ ಪದಾರ್ಥಗಳು ಆರೋಗ್ಯಕರವಾಗಿವೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳುವ ಅಗತ್ಯವಿದೆ. ಇದಕ್ಕೆ ನೆರವಾಗಲು ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದೆ.ತಿದ್ದುಪಡಿಯ ಕರಡು ಅಧಿಸೂಚನೆಯನ್ನು ಈಗ ಸಲಹೆಗಳು ಮತ್ತು ಆಕ್ಷೇಪಣೆಗಳಿಗಾಗಿ ಸಾರ್ವಜನಿಕ ಡೊಮೇನ್‌ನಲ್ಲಿ ಇರಿಸಲಾಗುತ್ತದೆ.ಪ್ಯಾಕೇಜ್ ಮಾಡಿದ ಆಹಾರ ಕಂಪನಿಗಳು ಶಿಫಾರಸು ಮಾಡಲಾದ ಆಹಾರದ ಪೊಟ್ಟಣಗಳಿಗೆ ಸಂಬಂಧಿಸಿದಂತೆ ಒಟ್ಟು ಸಕ್ಕರೆ, ಒಟ್ಟು ಸ್ಯಾಚುರೇಟೆಡ್ ಕೊಬ್ಬು ಮತ್ತು ಸೋಡಿಯಂ ಪ್ರಮಾಣದ ಮಾಹಿತಿಯನ್ನು ದಪ್ಪ ಅಕ್ಷರಗಳಲ್ಲಿ ಮಾಹಿತಿಯನ್ನು ನೀಡಬೇಕಾಗುತ್ತದೆ ಎಂದು ಹೇಳಿದೆ.