ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಿಂದಿಸಿದ್ದಾರೆ ಎಂಬ ಆರೋಪ ಹೊತ್ತಿರುವ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಗುರುವಾರ ತಡರಾತ್ರಿಯೇ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ರಾತ್ರಿಯೇ ಅವರನ್ನು ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಸಿ.ಟಿ. ರವಿ ಅವರ ತಲೆಗೆ ಪೆಟ್ಟಾಗಿದೆ. ರಕ್ತ ಸೋರಿದ ಗಾಯಗಳಾಗಿವೆ. ಯಾವ ರೀತಿ ಪೆಟ್ಟು ಬಿದ್ದಿದೆ ಎನ್ನುವುದು ಗೊತ್ತಾಗಿಲ್ಲ. ಸಿ.ಟಿ.ರವಿ ಅವರು ಬೆಂಗಳೂರಿಗೆ ಹೊರಡಲು ಸಿದ್ದರಾಗಿಲ್ಲದ ಕಾರಣ ಪೊಲೀಸರು ಹೆಗಲ ಮೇಲೆಯೇ ಹೊತ್ತುಕೊಂಡು ಬಂದಿದ್ದಾರೆ. ಪೊಲೀಸ್ ಜೀಪಿನ ಕಿಟಕಿಯಿಂದ ಅವರ ದೇಹವನ್ನು ವಾಹನದೊಳಗೆ ತೂರಿಸಲಾಗಿದೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಬೆಂಗಳೂರಿಗೆ ಕೊಂಡೊಯ್ಯುತ್ತಲೇ ಪತ್ರಕರ್ತರ ಜೊತೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ರವಿ ಅವರನ್ನು ಕೊಲೆ ಮಾಡಲು ಯತ್ನಿಸಲಾಗಿದೆ. ಈ ಬಗ್ಗೆ ಎಫ್ ಐಅರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ. ಜೊತೆಗೆ ಠಾಣೆಯಲ್ಲಿ ಅವರ ಮೇಲೆ ಹಲ್ಲೆ ನಡೆದಿರುವುದರಿಂದ ಗಾಯಗಳಾಗಿವೆ, ಠಾಣೆಯಲ್ಲಿ ಅವರಿಗೆ ಹೊಡೆದ ಕಾರಣ ಅವರ ತಲೆ ಒಡೆದು ಹೋಗಿದೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಇದನ್ನು ಖಂಡಿಸಿ ಶುಕ್ರವಾರದಂದು ಚಿಕ್ಕಮಗಳೂರು ಬಂದ್ ಕರೆ ನೀಡಲಾಗಿದೆ. ಡಿಸೆಂಬರ್ 26ರಂದು ಬೆಳಗಾವಿ ಬಂದ್ ಮಾಡಲಾಗುವುದು. ರಾಜ್ಯಾದ್ಯಂತ ಇದರ ವಿರುದ್ಧ ದೊಡ್ಡ ಹೋರಾಟ ನಡೆಯಲಿದೆ ಎಂದು ಅವರು ತಿಳಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿ.ಟಿ. ರವಿ ಅವರ ಮೇಲೆ ದೂರು ನೀಡಿದ್ದಾರೆ. ಆದರೆ ರವಿ ಅವರು ಹೆಬ್ಬಾಳಕರ ಅವರ ಬೆಂಬಲಿಗರು ತಮ್ಮ ಮೇಲೆ ಕೊಲೆ ಮಾಡಲು ಮುಂದಾಗಿದ್ದಾರೆ ಎಂದು ಪ್ರತಿ ದೂರು ನೀಡಿದ್ದರು. ಪೊಲೀಸರು ಮಾತ್ರ ಎಫ್ ಐಆರ್ ದಾಖಲು ಮಾಡಿಕೊಳ್ಳುವ ಮೊದಲೇ ಅವರನ್ನು ಬೆಂಗಳೂರಿಗೆ ಕರೆದೊಯ್ಯಲು ಮುಂದಾಗಿದ್ದಾರೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸುನಿಲ್ ಕುಮಾರ್, ವಿಠ್ಠಲ ಹಲಗೇಕರ ಅವರು ಪ್ರತಿಭಟನೆ ನಡೆಸಿದರು. ಬೆಂಗಳೂರಿಗೆ ಕರೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಕೆಲಹೊತ್ತು ಖಾನಾಪುರ ಪೊಲೀಸ್ ಠಾಣೆ ಬಳಿ ಬಿಗುವಿನ ಸ್ಥಿತಿ ನಿರ್ಮಾಣವಾಯಿತು. ಆದರೂ ಪೊಲೀಸರು ಅವರನ್ನು ಬೆಂಗಳೂರಿಗೆ ಕರೆದೊಯ್ದರು.