ದೆಹಲಿ : ಲೋಕಸಭಾ ಚುನಾವಣೆ ವೇಳೆ ಹಾವೇರಿ ಮತಕ್ಷೇತ್ರದಿಂದ ಆರಂಭದಲ್ಲಿ ಸ್ಪರ್ಧೆಗೆ ಬಸವರಾಜ ಬೊಮ್ಮಾಯಿ ಹಿಂದೇಟು ಹಾಕಿದ್ದರು. ಈ ಸಲ ಸಹ ಶಿಗ್ಗಾವಿ ಮತಕ್ಷೇತ್ರದ ಉಪಚುನಾವಣೆಯಲ್ಲೂ ನನ್ನ ಮಗನಿಗೆ ಟಿಕೆಟ್ ಬೇಡ ಎಂದಿದ್ದರು. ಆದರೆ, ಬಿಜೆಪಿ ವರಿಷ್ಠರು ಬೊಮ್ಮಾಯಿ ಅವರ ಮನವಿಗೆ ಓಗೊಡದೆ ಮತ್ತೆ ಅವರ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಿದ್ದಾರೆ.

ಹಾವೇರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರು ತಮ್ಮ ಶಿಷ್ಯ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲು ಮನವೊಲಿಸಿ ಯಶಸ್ವಿಯಾಗಿದ್ದರು. ಹಾವೇರಿಯಲ್ಲಿ ತಮ್ಮ ಮಗ ಕಾಂತೇಶ್ ಅವರಿಗೆ ಟಿಕೆಟ್ ನೀಡುವಂತೆ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದರು. ಕೊನೆಗೆ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ಬೇಸತ್ತು ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಬಂಡಾಯವೆದ್ದು ಸ್ಪರ್ಧೆ ನಡೆಸಿದ್ದರು. ಆದರೆ, ಬಸವರಾಜ ಬೊಮ್ಮಾಯಿ ಹಾವೇರಿ ಲೋಕಸಭಾ ಮತಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಅವರು ವಿಧಾನಸಭೆಗೆ ಆಯ್ಕೆಯಾದ ಶಿಗ್ಗಾವಿ ಮತಕ್ಷೇತ್ರ ತೆರವಾಗಿದೆ. ಹೀಗಾಗಿ ಈಗ ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್ ಬೇಡ ಎಂದು ಬಸವರಾಜ ಬೊಮ್ಮಾಯಿ ಮತ್ತೆ ಬಿಜೆಪಿ ನಾಯಕರ ಮೊರೆ ಹೋಗಿದ್ದರು. ಆದರೆ, ಬಿಜೆಪಿ ನಾಯಕರು ಈ ಬಾರಿಯೂ ಅವರ ಮಾತನ್ನು ಗಣನೆಗೆ ತೆಗೆದುಕೊಳ್ಳದೆ ಮತ್ತೆ ವಿಶ್ವಾಸ ಇಟ್ಟು ಅವರ ಮಗನಿಗೆ ಟಿಕೆಟ್ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಮಗ ಭರತ ಬಸವರಾಜ ಬೊಮ್ಮಾಯಿ ಸಿಂಗಾಪುರ ವಿಶ್ವವಿದ್ಯಾಲಯದಿಂದ ಎಂಬಿಎ ಪದವೀಧರರಾಗಿದ್ದಾರೆ. ಇನ್ನೂ ತರುಣರಾಗಿದ್ದು ಕೇವಲ 35 ವರ್ಷ ವಯಸ್ಸಿನವರಾಗಿದ್ದಾರೆ. ದಶಕಗಳಿಂದ ತಮ್ಮ ತಂದೆ ಆಳಿದ್ದ ಶಿಗ್ಗಾವಿ ಮತಕ್ಷೇತ್ರದಲ್ಲಿ ಉತ್ತರಾಧಿಕಾರಿಯಾಗಲು ಈಗ ಬಿಜೆಪಿ ಭರತ್ ಅವರಿಗೆ ಅವಕಾಶ ಮಾಡಿಕೊಟ್ಟಿದೆ. ಇದನ್ನು ಯಾವ ರೀತಿಯಲ್ಲಿ ಜಯಿಸುತ್ತಾರೆ ಕಾದು ನೋಡಬೇಕಾಗಿದೆ.