ಬೆಳಗಾವಿ: ಕಳೆದ ಒಂದೂವರೆ ವರ್ಷದಿಂದ ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದ ಡಿಎಚ್ ಒ ಡಾ.ಮಹೇಶ ಕೋಣಿ ಅವರನ್ನು ಇದೀಗ ಹುದ್ದೆ ತೋರಿಸದೆ ವರ್ಗಾವಣೆ ಮಾಡಿರುವುದು ಜಿಲ್ಲೆಯ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಅವರು ಕೆಲವು ತಿಂಗಳುಗಳ ಕಾಲ ನಕಲಿ ವೈದ್ಯರನ್ನು ಗುರುತಿಸಿ ಅವರು ನಡೆಸುತ್ತಿದ್ದ ಆಸ್ಪತ್ರೆಗಳನ್ನು ಬಂದ್ ಮಾಡಿಸಿದ್ದರು. ಮಾತ್ರವಲ್ಲ, ಅಂತಹವರಿಗೆ ಶಿಕ್ಷೆಗೆ ಒಳಪಡಿಸಿದ್ದರು. ಜೊತೆಗೆ ಅವರು ಕೋವಿಡ್ ಸಂದರ್ಭದಲ್ಲಿ ಮಾಡಿದ್ದ ಕೆಲಸಗಳು ಜನರ ಅಪಾರ ಮೆಚ್ಚುಗೆ ಪಾತ್ರವಾಗಿತ್ತು. ಈ ನಡುವೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬುಧವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ದಿನವೇ ಅವರನ್ನು ವರ್ಗಾವಣೆ ಮಾಡಿರುವುದು ಇದೀಗ ನಾನಾ ವದಂತಿಗಳಿಗೆ ಕಾರಣವಾಗಿದೆ. ಅತ್ಯಂತ ನಿಷ್ಠ ಹಾಗೂ ದಕ್ಷತೆಯಿಂದ ಕೆಲಸ ಮಾಡುತ್ತಿದ್ದ ಅಧಿಕಾರಿಗೆ ಸರ್ಕಾರ ಶಿಕ್ಷೆ ವರ್ಗಾವಣೆ ರೂಪದಲ್ಲಿ ಶಿಕ್ಷೆ ನೀಡಿರುವುದು ಅಧಿಕಾರಿ ವರ್ಗದ ಬೇಸರಕ್ಕೆ ಕಾರಣವಾಗಿದೆ.