ಬೆಳಗಾವಿ : ಸುಮಾರು ಎರಡು ಸಾವಿರ ವರ್ಷಗಳ ಭವ್ಯ ಹಿನ್ನೆಲೆ ಹೊಂದಿರುವ ಕನ್ನಡ ಭಾಷೆಗೆ ದಶಕಗಳ ಕಾಲ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಬೇಕು ಎಂದು ಕನ್ನಡಿಗರು ಒಕ್ಕೊರಲಿನಿಂದ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದರು. ಕೊನೆಗೂ ಕೇಂದ್ರ ಸರಕಾರ 2008ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನವನ್ನು ದಯಪಾಲಿಸಿತ್ತು.

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ಹಾಗೂ ಅತ್ಯಂತ ಪ್ರಾಚೀನ ಭಾಷೆ ಎಂಬ ಅಭಿದಾನಕ್ಕೆ ಪಾತ್ರವಾಗಿರುವ ತಮಿಳಿಗೆ ಮೊಟ್ಟಮೊದಲು ಶಾಸ್ತ್ರೀಯ ಭಾಷೆಗಳ ಸ್ಥಾನಮಾನ ನೀಡಲಾಯಿತು. ಅನಂತರ ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನವನ್ನು ಕೇಂದ್ರ ಸರಕಾರ ನೀಡಿತು. ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಸುಮಾರು 2000 ವರ್ಷಗಳ ಹಿನ್ನೆಲೆ ಹೊಂದಿದೆ. ಗೋದಾವರಿಯಿಂದ ಕಾವೇರಿ ವರೆಗೂ ಕನ್ನಡ ನಾಡಿನ ವಿಸ್ತಾರ ಹಬ್ಬಿತು ಎಂಬ ಹಿನ್ನೆಲೆ ಹೊಂದಿರುವ ಶಾಸನಗಳು ಕನ್ನಡದ ಗತ ಇತಿಹಾಸಕ್ಕೆ ಸಾಕ್ಷಿಯಾಗಿವೆ. ಸದ್ಯ ದೊರೆತಿರುವ ಶಾಸನಗಳ ಪೈಕಿ ಹಲ್ಮಿಡಿ ಶಾಸನ ಅತ್ಯಂತ ಹಳೆಯ ಶಾಸನವಾಗಿ ಗುರುತಿಸಿಕೊಂಡಿದ್ದು ಇದು ಹಾಸನ ಜಿಲ್ಲೆಯಲ್ಲಿ ದೊರೆತಿದೆ. ಅನಂತರ ಶಿವಮೊಗ್ಗ ಜಿಲ್ಲೆಯ ತಾಳಗುಪ್ಪದಲ್ಲೂ ಹಳೆಯ ಶಾಸನ ಸಿಕ್ಕಿದೆ. ಇದು ಹಲ್ಮಿಡಿ ಶಾಸನಕ್ಕಿಂತ ಇನ್ನೂ ಪ್ರಾಚೀನ ಎಂಬ ಮಾಹಿತಿ ಇದೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಸಂಶೋಧನೆಗಳು ಆಗಬೇಕಾಗಿದೆ.

ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಪಟ್ಟ ಲಭಿಸಿದೆ. ಆದರೆ, ನಿರೀಕ್ಷೆಯಂತೆ ಅದಕ್ಕೆ ಬೇಕಾದ ಅನುದಾನಗಳು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು ಹಾಗೂ ಸಾಹಿತಿಗಳು ಆಗಾಗ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರೆತ ನಂತರ ಕನ್ನಡಕ್ಕೆ ವಿಶೇಷ ಅನುದಾನ ದೊರೆಯುವ ಜೊತೆ ಇನ್ನೂ ಹತ್ತು ಹಲವು ಪ್ರಯೋಜನಗಳು ಸಿಗಲಿವೆ. ಈ ನಿಟ್ಟಿನಲ್ಲಿ ಕನ್ನಡಿಗರು ಕೇಂದ್ರ ಸರಕಾರವನ್ನು ಆಗಾಗ ಒತ್ತಾಯಿಸುತ್ತಿದ್ದು, ಕೇಂದ್ರ ಸರ್ಕಾರ ಆದಷ್ಟು ಬೇಗನೆ ಕರ್ನಾಟಕಕ್ಕೆ ಅನುದಾನ ನೀಡಬೇಕಿದೆ.

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಲಭಿಸಿ ಸುಮಾರು 15 ವರ್ಷಗಳು ಲಭಿಸಿದರೂ ನಿರೀಕ್ಷೆ ಪ್ರಮಾಣದಲ್ಲಿ ಕನ್ನಡಿಗರ ಕನಸು ಇನ್ನೂ ಈಡೇರಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುತುವರ್ಜಿ ವಹಿಸಬೇಕಾಗಿದೆ.

ಕನ್ನಡ, ತಮಿಳು ಮತ್ತು ತೆಲುಗು ಜೊತೆ ಇದೀಗ ನೆರೆಯ ರಾಜ್ಯವಾಗಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮರಾಠಿ ಭಾಷೆಗೂ ಶಾಸ್ತ್ರೀಯ ಭಾಷಾ ಸ್ಥಾನಮಾನದ ಗೌರವ ನೀಡಿದೆ. ಮರಾಠಿ ಭಾಷೆಯ ಪ್ರಾಚೀನ ಶಾಸನಗಳು ಕನ್ನಡ ನಾಡಿನಲ್ಲಿ ಮೊಟ್ಟ ಮೊದಲಿಗೆ ಕಂಡುಬಂದಿರುವುದು ವಿಶೇಷ. ಒಂದು ಕಾಲದಲ್ಲಿ ಇಡೀ ಮಹಾರಾಷ್ಟ್ರ ಕನ್ನಡ ಪ್ರದೇಶವಾಗಿತ್ತು. ಈ ನಿಟ್ಟಿನಲ್ಲಿ ಸಂಶೋಧಕರು ಸಾಕಷ್ಟು ಶಾಸನಗಳನ್ನು ಶೋಧಿಸಿದ್ದಾರೆ. ಆದರೆ ಇದೀಗ ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದಿರುವ ಮಹಾರಾಷ್ಟ್ರ ತನ್ನ ಬೇರುಗಳನ್ನು ಕರುನಾಡಿನಲ್ಲಿ ಹೊಂದಿರುವುದು ಗಮನಿಸಬೇಕಾದ ಸಂಗತಿ. ಮರಾಠಿ ಭಾಷೆ ಹಾಗೂ
ಮೊದಲಿನಿಂದಲೂ ಕನ್ನಡ ಭಾಷೆಯೊಂದಿಗೆ ಆಳವಾದ ನಂಟು ಹೊಂದಿರುವುದನ್ನು ಗಮನಿಸಬಹುದು.

ಸದ್ಯ ಭಾರತದಲ್ಲಿ ಒಟ್ಟು 11 ಶಾಸ್ತ್ರೀಯ ಭಾಷೆಗಳಿವೆ. ಕ್ರಿಸ್ತಪೂರ್ವ 500 ಮತ್ತು 300ರ ನಡುವೆ ತಮಿಳು, ಕ್ರಿಸ್ತಪೂರ್ವ 100 ಮತ್ತು 200ರ ನಡುವೆ ಸಂಸ್ಕೃತ, ಅನಂತರ ಸುಮಾರು 2000 ವರ್ಷಗಳ ಹಿನ್ನೆಲೆಯ ಕನ್ನಡ, ತೆಲುಗು ಸ್ಥಾನ ಪಡೆದುಕೊಂಡಿವೆ. ಒಡಿಸ್ಸಾ ಮಲಯಾಳಂ, ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ, ಬಂಗಾಳಿ ಭಾಷೆಗಳು ಇದೀಗ ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದುಕೊಂಡ ಭಾಷೆಗಳಾಗಿವೆ.