ಬೆಂಗಳೂರು : ಮುಂಗಾರು ಮಳೆ ನಿಧಾನವಾಗಿ ರಾಜ್ಯಾದ್ಯಂತ ಆವರಿಸುತ್ತಿದ್ದು, ಶನಿವಾರ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಿದೆ. ಬೆಳಗಾವಿ, ಬೆಂಗಳೂರು, ಧಾರವಾಡ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಗದಗ, ಬಳ್ಳಾರಿ, ಹಾವೇರಿ, ಬೀದರ್‌, ಚಿಕ್ಕಮಗಳೂರು, ಕೊಡಗು ಮತ್ತಿತರ ಕಡೆ ಉತ್ತಮ ಮಳೆಯಾಗಿದೆ. ಕರಾವಳಿಯಲ್ಲೂ ಮಳೆ ಅಬ್ಬರಿಸುತ್ತಿದ್ದು, ಶನಿವಾರ ಉತ್ತಮ ಮಳೆಯಾಗಿದೆ. ಭಾನುವಾರ ಹಾಗೂ ಸೋಮವಾರ ಈ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯ ಭಟ್ಕಳ, ಮುಂಡಗೋಡ ಮತ್ತಿತರ ಕಡೆ ಶುಕ್ರವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆಯಾಗಿದ್ದು, ಜನಜೀವನ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು.

ದ.ಕ.ಜಿಲ್ಲೆಯಲ್ಲಿ ಸಮುದ್ರ ತೀರ ಪ್ರಕ್ಷುಬ್ದಗೊಳ್ಳುವ ಸೂಚನೆ ಕಾಣಿಸಿಕೊಂಡಿದ್ದು, ಉಳ್ಳಾಲ, ಸೋಮೇಶ್ವರ, ಉಚ್ಚಿಲ ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಭಾರೀ ಗಾಳಿಯ ವೇಗಕ್ಕೆ ಅಲೆಗಳು ಅಬ್ಬರಿಸುತ್ತಿದ್ದು, ತೀರದ ನಿವಾಸಿಗಳು ಕಡಲ್ಕೊರೆತದ ಭೀತಿಯಲ್ಲಿದ್ದಾರೆ. ಬೆಳಗಾವಿ, ಧಾರವಾಡ, ಹಾವೇರಿಯಲ್ಲಿ ತಗ್ಗು ಪ್ರದೇಶಗಳಲ್ಲಿನ 60ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಾದ್ಯಂತ ಭಾರೀ ಮಳೆಯಾಗಿದ್ದು, ಮಳೆಯ ಆರ್ಭಟಕ್ಕೆ ಕಾಲುವೆ, ಹಳ್ಳಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ತುಂಗಾ ನದಿಯಲ್ಲೂ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿದೆ.