ಕಾಸರಗೋಡು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗಲು ನಿರಂತರ ಪರಿಶ್ರಮ ಸಮಯ ನಿರ್ವಹಣೆಯು ಮುಖ್ಯವಾಗಿದೆ. ಕನಸುಗಳ ಜೊತೆಗೆ ನಡೆಯಲು ಅಪಾರ ಇಚ್ಛಾಶಕ್ತಿಯ ಅವಶ್ಯಕತೆ ಬೇಕು. ಮಾನಸಿಕ ಆರೋಗ್ಯದೊಂದಿಗೆ ಸ್ಪರ್ಧಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿಯುವುದೂ ಕೂಡ ಮುಖ್ಯವಾಗಿದ್ದು ಇದರಿಂದ ತಮ್ಮಲ್ಲಿರುವ ಕೊರತೆಗಳನ್ನು ಸರಿಪಡಿಸಿಕೊಳ್ಳಲು ನೆರವಾಗುತ್ತದೆ ಎಂದು ೨೦೨೩ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಮೃತ ಸೀತಾಪನ್ ಹೇಳಿದರು

ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ ಕನ್ನಡ ವಿಭಾಗವು ಹಮ್ಮಿಕೊಂಡಿದ್ದ ನೆಟ್- ಜೆಆರ್‌ಎಫ್ ತರಬೇತಿ ಉದ್ಘಾಟಿಸಿದ ಅವರು ಪರೀಕ್ಷಾ ತರಬೇತಿಗಳು ಯಶಸ್ಸನ್ನು ತಲುಪಲು ಸಹಕಾರಿಯಾಗುತ್ತವೆ. ಸರಿಯಾದ ಸಂಪನ್ಮೂಲಗಳನ್ನು ಅಧ್ಯಯನಕ್ಕೆ ಆಯ್ದುಕೊಳ್ಳುವುದು ಬಹಳ ಮುಖ್ಯವಾಗಿದ್ದು, ಅಧ್ಯಯನಕ್ಕೆ ಎಲ್ಲ ಕುಟುಂಬಗಳ ಶಾಪ ವಿಮೋಚನೆಗೊಳಿಸುವ ಶಕ್ತಿ ಇದೆ ಎಂದರು.

ಪ್ಲೇಸ್ಮೆಂಟ್ ಸೆಲ್‌ನ ಸಂಯೋಜಕರಾದ ಡಾ. ಗೋವಿಂದರಾಜು ಕೆ.ಎಂ ಕಾರ್ಯಕ್ರಮವನ್ನು ಸಂಯೋಜಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ. ಸೌಮ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ. ಪ್ರವೀಣ್ ಪದ್ಯಾಣ, ಶ್ರೀ ಚೇತನ್ ಎಂ, ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ಉಪಸ್ಥಿತರಿದ್ದರು.

ಅಮೃತ ಸೀತಾಪನ್ ಕನ್ನಡ ವಿಭಾಗದ ಸಂಶೋಧನಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿ ವಿನಯ ಎಂ ಸ್ವಾಗತಿಸಿ, ಜ್ಯೋತಿರ್ಲಕ್ಷ್ಮಿ ವಂದಿಸಿದರು, ವಿದ್ಯಾರ್ಥಿ ಪ್ರತಿನಿಧಿ ಸಚಿನ್ ನಿರೂಪಿಸಿದರು.