ಬೆಳಗಾವಿ: ಬೆಳಗಾವಿ ಜಿಲ್ಲೆಯ ಜನರ ಬೇಡಿಕೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿರುವುದಾಗಿ ಸಂಸದ ಜಗದೀಶ ಶೆಟ್ಟರ್ ತಿಳಿಸಿದರು.

ಪತ್ರಕರ್ತರ ಜೊತೆಗೆ ಮಾತನಾಡಿದ ಅವರು, ಜಿಲ್ಲೆಯ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿರುತ್ತೇನೆ. ಕೇಂದ್ರ ರೈಲ್ವೆ ಸಚಿವರಿಗೆ ಹಲವು ಬಾರಿ ಭೇಟಿಯಾದರೂ ಧಾರವಾಡ- ಬೆಂಗಳೂರು ವಂದೇ ಭಾರತ ರೈಲು ಸೇವೆಯನ್ನು ಇದುವರೆಗೂ ಬೆಳಗಾವಿಗೆ ವಿಸ್ತರಿಸಿಲ್ಲ. ಈ ನಿಟ್ಟಿನಲ್ಲಿ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಿ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ ಬೆಳಗಾವಿಗೆ ಉಡಾನ್ ಯೋಜನೆಯನ್ನು ಮುಂದುವರಿಸುವಂತೆ ಕೋರಿದ್ದೇನೆ ಎಂದು ತಿಳಿಸಿದರು.

ಕರ್ನಾಟಕ ಕಾಂಗ್ರೆಸ್ ಸರಕಾರದ ಏಜೆಂಟರಂತೆ ಪೊಲೀಸರು ವರ್ತಿಸಿರುವುದು ಸರಿಯಲ್ಲ. ಇಲ್ಲಿನ ಗೂಂಡಾ ಸಂಸ್ಕೃತಿಯನ್ನು ಜನ ವಿರೋಧಿಸುತ್ತಾರೆ. ಸುವರ್ಣ ವಿಧಾನಸೌಧದಲ್ಲಿ ಗೂಂಡಾಗಿರಿ ಮಾಡಿದವರು ಮತ್ತು ಈಗ ಮಾಜಿ ಸಚಿವ ಸಿ.ಟಿ.ರವಿ ಅವರಿಗೆ ಬೆದರಿಕೆ ಪತ್ರ ಬರೆದವರನ್ನು ಈ ಕೂಡಲೇ ಬಂಧಿಸುವ ಕೆಲಸ ಆಗಬೇಕು ಎಂದು ಅವರು ಒತ್ತಾಯಿಸಿದರು. ಹಿಂದುತ್ವಕ್ಕಾಗಿ ಹೋರಾಡುವ ಸಿ.ಟಿ.ರವಿ ಅವರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಯುತ್ತಿದೆ. ಸಿಟಿ ರವಿ ಅವರನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿತ್ತು. ಈಗ ಬೆದರಿಕೆ ಪತ್ರವನ್ನು ಸಹ ಬರೆಯಲಾಗಿದೆ. ಇದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹಾಳಾಗಿದೆ ಎನ್ನುವುದು ತಿಳಿಯುತ್ತದೆ ಎಂದು ಅವರು ದೂರಿದರು.