ಬೆಳಗಾವಿ : ಬೆಳಗಾವಿ ಜಿಲ್ಲೆಯ ಕೆಲ ಪ್ರಮುಖ ರಸ್ತೆಗಳ ಕಾಮಗಾರಿಯನ್ನು ಕೂಡಲೇ ನಡೆಸುವಂತೆ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗೋವಾ ರಾಜ್ಯಕ್ಕೆ ಉತ್ತಮ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬೆಳಗಾವಿ – ಖಾನಾಪುರ – ರಾಮನಗರ – ಅನಮೋಡ ಮಾರ್ಗವಾಗಿ ಗೋವಾ ಬಾರ್ಡರ ( 84 ಕಿ.ಮಿ ) ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಬೆಳಗಾವಿ- ಜಾಂಬೋಟಿ – ಕಣಕೊಂಬಿ ಚೋರ್ಲಾ ಘಾಟ್ ವರೆಗೆ ಅಲ್ಫಾಲ್ಟ್ ರಸ್ತೆ ( 43 ಕಿ.ಮಿ ) ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ದೊರೆತು ಅನುದಾನ ಸಹ ಬಿಡುಗಡೆಯಾಗಿದೆ. ಆದರೆ ಕಾಮಗಾರಿ ಪ್ರಾರಂಭವಾಗದೇ ಇರುವ ಬಗ್ಗೆ ಕಾರಣ ತಿಳಿಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಧಾರವಾಡ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇವರ ಜೊತೆ ದಿನಾಂಕ 08- 10- 2024 ಸಾಯಂಕಾಲ ಸಭೆ ನಡೆಸಿ ಚರ್ಚಿಸಿದರು.

ಪ್ರಸ್ತಾಪಿತ ಎರಡು ರಸ್ತೆಗಳು ಬೆಳಗಾವಿಯಿಂದ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಬಹುಮುಖ್ಯವಾದ ರಸ್ತೆಗಳು ವ್ಯಾಪಾರ, ವಹಿವಾಟು ಮತ್ತು ಸರಕು ಸಾಗಾಣಿಕೆಗೆ ತುಂಬಾ ಉಪಯುಕ್ತಕರ. ಆದರೆ ಇವೆರಡೂ ರಸ್ತೆಗಳು ತುಂಬಾ ಹಾಳಾದ ಹಿನ್ನೆಲೆಯಲ್ಲಿ ವಾಹನ ಸಂಚಾರ ಕುಂಠಿತಗೊಂಡಿದ್ದು, ಸಾರ್ವಜನಿಕರಿಂದ ಹಾಗೂ ವ್ಯಾಪಾರಸ್ಥರಿಂದ ಅನೇಕ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಆಯಾ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪ್ರಸ್ತಾಪಿತ ಎರಡು ರಸ್ತೆಗಳ ಕಾಮಗಾರಿಗಳನ್ನು ಕೂಡಲೇ ಆರಂಭಿಸುವಂತೆ ಸೂಚಿಸಿದರು.

ಬೆಳಗಾವಿ ( ಶಗಣಮಟ್ಟಿ ) ಹುನಗುಂದ ಮಾರ್ಗವಾಗಿ ರಾಯಚೂರು ನಡುವಿನ ನಿರ್ಮಾಣ ಪ್ರಾಥಮಿಕ ಹಂತದಲ್ಲಿರುವ ರಸ್ತೆ ಕಾಮಗಾರಿಯ ಬಗ್ಗೆ ಪ್ರಗತಿಯ ಬಗ್ಗೆ ವಿವರಗಳನ್ನು ಸಹ ಅಧಿಕಾರಿಗಳಿಂದ ಸಂಸದರು ಪಡೆದರು.

ಸಭೆಯಲ್ಲಿ ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಭುವನೇಶ್ವರ ಕುಮಾರ, ಪವನ್ ಹಾಗೂ ಭೂಸ್ವಾಧೀನ ಅಧಿಕಾರಿ ರಾಜಶ್ರೀ ಜೈನಾಪೂರ, ಚೌವ್ಹಾಣ್ ಹಾಜರಿದ್ದರು.