ಬೆಳಗಾವಿ: ಮೋದಿಯವರು ಮತ್ತೊಮ್ಮೆ ಪ್ರಧಾನಿ ಆದರೆ ಕಾಮನ್ ಸಿವಿಲ್ ಕೋಡ್ ದೇಶಾದ್ಯಂತ ಜಾರಿಗೆ ತರುತ್ತೇವೆ. ಅಧಿಕಾರಕ್ಕೆ ಬಂದ ಮೇಲೆ ಮುಂದಿನ ಐದು ವರ್ಷದ ಕೆಲಸಗಳು ಮೊದಲೇ ಜಾರಿಗೆ ತಂದು, ಭ್ರಷ್ಟಾಚಾರ ರಹಿತ ಆಡಳಿತ ಮಾಡುತ್ತೇವೆ. ನಾನು ಲೋಕಸಭೆಗೆ ಆಯ್ಕೆ ಆದರೆ ಬೆಳಗಾವಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ತಿಳಿಸಿದರು.‌

ಶುಕ್ರವಾರ ಬೆಳಗಾವಿ ಕೋರ್ಟ್ ಆವರಣದಲ್ಲಿ ಇರುವ ವಕೀಲರ ಸಂಘದ ಸಭಾ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಯಾವುದಾದರೂ ಯೋಜನೆ ಹಾಕಿಕೊಂಡರೆ ಅದನ್ನು ಕಾರ್ಯರೂಪಕ್ಕೆ ತಂದೆ ತರುತ್ತೇನೆ. ಹುಬ್ಬಳ್ಳಿ ಮಾದರಿಯಲ್ಲಿ ಬೆಳಗಾವಿಯಲ್ಲೂ ಕೋರ್ಟ್ ಆವರಣ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.‌

ನಾನು ರಾಜಕಾರಣಿ ಎನ್ನುವುದಕ್ಕಿಂತ ನಾನೊಬ್ಬ ವಕೀಲ.‌ ಇಡೀ ರಾಜ್ಯದಲ್ಲಿ ದೊಡ್ಡದಾದ ಬಾರ್ ಅಸೋಸಿಯೇಷನ್ ಅಂದರೆ ಅದು ಬೆಳಗಾವಿ ಬಾರ್ ಅಸೋಸಿಯೇಷನ್. 15 ವರ್ಷ ಹುಬ್ಬಳ್ಳಿ – ಧಾರವಾಡ ಕೋರ್ಟ್ ನಲ್ಲಿ ವಕೀಲನಾಗಿ ತರಬೇತಿ ಪಡೆದಿದ್ದೇನೆ.‌ 1994 ರಲ್ಲಿ ಶಾಸಕನಾದಾಗಿ ಕೆಲಸದ ಒತ್ತಡದಲ್ಲಿ ತರಬೇತಿ ಮುಂದುವರಿಸಲು ಆಗಲಿಲ್ಲ ಎಂದು ತಿಳಿಸಿದರು.‌

ನ್ಯಾಯಾಲಯ ಆವರಣ ಎಂದರೆ ಎಲ್ಲ ವರ್ಗದ ಜನರು ಬಂದೆ ಬರುತ್ತಾರೆ.‌ ವಕೀಲರಾಗಿ ತರಬೇತಿ ಪಡೆಯುವರು ಸಾಕಷ್ಟು ಜನ ಸಚಿವರಾಗಿದ್ದಾರೆ, ಮುಖ್ಯಮಂತ್ರಿಗಳು ಆಗಿದ್ದಾರೆ.‌ ಈ ಲೋಕಸಭಾ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಈ ಹಿಂದೆ ವಕೀಲರು ಎಲ್ಲರೂ ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಂತೆ ನನಗೆ ಬೆಂಬಲ ನೀಡಬೇಕು. ವಕೀಲರ ಸಮಸ್ಯೆ ಕುರಿತು ವಿಧಾನ ಸಭೆಯಲ್ಲಿ ಸಾಕಷ್ಟು ಸಲ ಧ್ವನಿ ಎತ್ತಿದ್ದೇನೆ. 1994 ರಲ್ಲಿ ಮೋದಲ ಬಾರಿ ಶಾಸಕನಾದಾಗ ವಕೀಲರೆ ನಿಂತು, ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾಗ ನಾನು ಜಯ ಗಳಿಸಿದೆ ಎಂದು ಹೇಳಿದರು.‌

ದೂರ ದೃಷ್ಟಿ ಇಟ್ಟುಕೊಂಡು ದೇಶದಲ್ಲಿ ನರೇಂದ್ರ ಮೋದಿಯವರು ಕೆಲಸ ಮಾಡುತ್ತಿದ್ದಾರೆ.‌ ಸ್ವದೇಶಿ ಉತ್ಪನ್ನಗಳಿಂದ ದೇಶದ ಹಲವಾರು ಜನರಲ್ಲಿ ಸ್ವಾಭಿಮಾನ ಮೂಡಿದೆ. ಆರ್ಟಿಕಲ್ 370 ತೆಗೆದು ಹಾಕಿದ್ದರಿಂದ ಬೆಳಗಾವಿ ಜನರು ಕಾಶ್ಮಿರಕ್ಕೆ ಹೊಗಿ ಆಸ್ತಿ ಖರೀದಿ ಮಾಡಬಹುದು, ಅದ್ದರಿಂದ ಕಾಶ್ಮೀರ ತುಂಬಾ ಅಭಿವೃದ್ಧಿ ಆಗಿದೆ‌. ಮುಂದಿನ ದಿನಗಳಲ್ಲಿ ಸ್ವಿಜರ್ಲ್ಯಾಂಡ್ ಹೋಗುವ ಬದಲು ನಾವು ಕಾಶ್ಮೀರಕ್ಕೆ ಹೋಗಿ ಪ್ರವಾಸ ಮಾಡಬಹುದು. ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ ಎಲ್ಲಾ ಕೆಲಸಗಳು ಆಗುತ್ತಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಅದು ರಾಮಮಂದಿರ ನಿರ್ಮಾಣ ಮಾಡಿದ್ದು ಎಂದು ತಿಳಿಸಿದರು.

30 ವರ್ಷದ ನಂಟು ಬೆಳಗಾವಿ ಜೊತೆ ನನಗೆ ಇದೆ. ಮೊದಲ ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಪ್ರವಾಹದಿಂದ ಹಾನಿಯಾದ ಮನೆಗಳಿಗೆ ಪರಿಹಾರ ನೀಡಿದ್ದೇವೆ. ಎರಡನೆ ಸಲ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸಂದರ್ಭದಲ್ಲಿ ಆಕ್ಸಿಜನ್ ನೀಡುವ ಕೆಲ ಮಾಡಿದ್ದೇವೆ ಎಂದು ತಿಳಿಸಿದರು.

ಬೆಳಗಾವಿಯನ್ನು ಪ್ರಾಮಾಣಿಕವಾಗಿ ಅಭಿವೃದ್ಧಿ ಪಡಿಸಲು ಕೆಲಸ ಮಾಡುತ್ತೇನೆ. ಎಲ್ಲಾ ಹಂತದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ಬೆಳಗಾವಿ ಅಭಿವೃದ್ಧಿಗೆ ಕಂಕಣಬದ್ದವಾಗಿ ಕೆಲಸ ಮಾಡುತ್ತೇವೆ ಎಂದು ತಳಿಸಿದರು.
ಉಡಾನ್ ಯೋಜನೆಯಡಿ ಮಂಗಳ ಅಂಗಡಿಯವರು ಎರಡನೆ ಟರ್ಮಿನಲ್ ಗಾಗಿ 310 ಕೊಟಿ ರೂ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಬೆಂಗಳೂರು, ಮಂಗಳೂರನ್ನು ಬಿಟ್ಟರೆ ಬೆಳಗಾವಿ ವಿಮಾನ ನಿಲ್ದಾಣ ಅತ್ಯಂತ ಬ್ಯುಜಿ ನಿಲ್ದಾಣ ಆಗಿದೆ.‌ ಮುಂದಿನ ದಿನದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.‌

ಬಿಜೆಪಿ ಉಪಾದ್ಯಕ್ಷ ಅನಿಲ ಬೆನಕೆ, ಬಿಜೆಪಿ ರಾಜ್ಯ ವಕ್ತಾರ ಎಂ.ಬಿ. ಜಿರಲಿ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮುರಗೇಂದ್ರಗೌಡಾ ಪಾಟೀಲ, ಬೆಳಗಾವಿ ವಕೀಲ ಸಂಘದ ಉಪಾಧ್ಯಕ್ಷ ವಿಜಯ ಪಾಟೀಲ , ಬಸವರಾಜ ಮುಗಳಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ದೇವಟೆ, ಹನಮಂತ ಕೊಂಗಾಲಿ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.