ಬೆಳಗಾವಿ :
ಶಾಲಾ-ಕಾಲೇಜುಗಳು ಸೇರಿ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿನ ಶಿಕ್ಷಕರಿಗೆ ಹೆಚ್ಚಿನ ಶಿಕ್ಷಣ ಮತ್ತು ತರಬೇತಿ ನೀಡುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಮಾದಾರ್ ಹೇಳಿದರು.

1996 ರಲ್ಲಿ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳವರಿಂದ ಸ್ಥಾಪಿತಗೊಂಡ
ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಹಳ ಹಿಂದೆ ಆರಂಭವಾದ ಶಿಕ್ಷಣ ಪದ್ಧತಿಯನ್ನೇ ಇಂದಿಗೂ ಮುಂದುವರಿಸಿಕೊಂಡು
ಹೋಗಲಾಗುತ್ತಿದೆ. ಪಾಠ ಮಾಡುವ ರೀತಿ ಬದಲಾಗಬೇಕಿದೆ. ಶಿಕ್ಷಣ ನೀಡುವ ಪದ್ಧತಿ ಇಂದಿನ
ದಿನಮಾನಕ್ಕೆ ತಕ್ಕಂತೆ ಬದಲಾಗಬೇಕಿದೆ. ಅಂದಾಗ ಮಾತ್ರ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವುದು ಸಾಧ್ಯ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರ್ಣಗೊಳಿಸಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸ್ ಮಾಡಿ ಕಾಲೇಜಿಗೆ ಬರುವ
ವಿದ್ಯಾರ್ಥಿಗಳ ಸಂಖ್ಯೆ 73 % ಮಾತ್ರ. ಇದು ಅತ್ಯಂತ ಗಂಭೀರ ವಿಚಾರ ನಂತರ ಪಿಯುಸಿ
ಮುಗಿಸಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಮುಗಿಸಿ ಹೊರಬೀಳುವ ವಿದ್ಯಾರ್ಥಿಗಳ
ಸಂಖ್ಯೆ ಕೇವಲ 27 ಪರ್ಸೆಂಟ್ ಮಾತ್ರ. ಇದನ್ನು ಎಲ್ಲರೂ ಅತ್ಯಂತ ಗಂಭೀರವಾಗಿ
ಪರಿಗಣಿಸಬೇಕಿದೆ ಎಂದು ಅವರು ಹೇಳಿದರು.

ಶಿಕ್ಷಣದ ಗುಣಮಟ್ಟ ಮತ್ತು ಸಾಧನೆಯಲ್ಲಿ ಇಂದು ಸಣ್ಣ ದೇಶವಾದ ಇಸ್ರೇಲ್ ನ ಯಹೂದ್ಯರು
ಮಾದರಿಯಾಗುತ್ತಾರೆ. ಒಟ್ಟು ನೊಬೆಲ್ ಪ್ರಶಸ್ತಿ ಪಡೆದ ವಾರ ಪೈಕಿ 25 % ನೊಬೆಲ್
ಪ್ರಶಸ್ತಿ ಪುರಸ್ಕೃತರು ಇಸ್ರೇಲ್‌ನವರು ಅಂದರೆ ಎರಡು ನೂರು ಜನ ನೋಬೆಲ್ ಪ್ರಶಸ್ತಿ
ವಿಜೇತರು ಅಲ್ಲಿನವರು. ಅದೇ ನಮ್ಮ ದೇಶದಲ್ಲಿ ನೊಬೆಲ್ ಪ್ರಶಸ್ತಿ ಪಡೆದವರು ಕೇವಲ
ಆರರಿಂದ ಏಳು ಜನ ಮಾತ್ರ. ಅದರಲ್ಲೂ ಇಬ್ಬರು ವಿದೇಶಿಯರು ಎಂಬುದು ಗಮನಾರ್ಹ ಎಂದರು.

ಕಳೆದ ದಶಕಗಳಿಗೆ ಹೋಲಿಸಿದರೆ ಇಂದು ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿವೆ. ಶಿಕ್ಷಕರ
ಸಂಖ್ಯೆ ಹೆಚ್ಚಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಆದರೆ ಫಲಿತಾಂಶ ಮಾತ್ರ ನಿಗದಿತ ಪ್ರಮಾಣದಲ್ಲಿ ಬರುತ್ತಿಲ್ಲ. ಇದನ್ನೆಲ್ಲ ಶಿಕ್ಷಣ
ತಜ್ಞರು ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಮುಖಂಡರು ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ.
ಐವತ್ತು ವರ್ಷಗಳ ಹಿಂದೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದ ಶಾಲೆಗಳು ಕಾಲೇಜುಗಳು
ಅಂದಿನ ದಿನಮಾನಕ್ಕೆ ತಕ್ಕಂತೆ ಅತ್ಯುತ್ತಮವಾದ ಶಿಕ್ಷಣವನ್ನು ನೀಡುತ್ತಿದ್ದವು. ತಾವು
ಸೇರಿ ನಾಲ್ಕು ಜನ ಐಎಎಸ್ ಪಾಸು ಮಾಡಿದವರು ಪ್ರಾಥಮಿಕ ಶಿಕ್ಷಣ ಪಡೆದದ್ದು 55 ವರ್ಷಗಳ
ಹಿಂದೆ ರಾಮದುರ್ಗದಲ್ಲಿ. ಅಲ್ಲಿನ ಮಹಾರಾಜರು ಸ್ಥಾಪಿಸಿದ್ದ ಶಾಲೆಯಲ್ಲಿ ಎಂಬುದು
ಗಮನಾರ್ಹ. ಅದೇ ರೀತಿ ಲಿಂಗೈಕ್ಯ ಶಿವಬಸವಸ್ವಾಮಿಜಿಯವರು ಪ್ರಾರಂಭಿಸಿದ ಸಿದ್ದರಾಮೇಶ್ವರ
ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ಇಂದು ನಾಡಿನಾದ್ಯಂತ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಾ ಗಣನೀಯ ಸಾಧನೆ ಮಾಡಿದ್ದು ಗಮನಾರ್ಹ ಸಂಗತಿ ಎಂದು ಅವರು ಹೇಳಿದರು.

ಹಲವು ಶತಮಾನಗಳ ಕಾಲ ನಮ್ಮನ್ನಾಳಿದ ಬ್ರಿಟಿಷರು, ಪೋರ್ಚುಗೀಸರು ಮತ್ತು ಫ್ರೆಂಚರು ಈ
ದೇಶದ ಶಿಕ್ಷಣಕ್ಕಾಗಲಿ ಆರೋಗ್ಯದ ಬಗ್ಗೆ ಆಗಲಿ ಕಾಳಜಿಯನ್ನು ವಹಿಸಲೇ ಇಲ್ಲ. ಅಂತಹ
ಕಾಲದಲ್ಲಿ ಶಿಕ್ಷಣದ ಬಗ್ಗೆ ಕಾಳಜಿಯನ್ನು ಹೊಂದಿದ್ದು ನಾಡಿನ ಲಿಂಗಾಯಿತ ಮಠಗಳು ಮಾತ್ರ. ಅದರೊಂದಿಗೆ ಮಠಗಳಲ್ಲದ ಕೆಲವು ಮಹನೀಯರು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. ಅದರ ಪರಿಣಾಮವೇ ದೇಶದಲ್ಲಿಂದು ಬ್ರಾಹ್ಮಣ ಸಮಾಜದ ನಂತರ ಅತಿ ಹೆಚ್ಚು ವಿದ್ಯಾವಂತರ ಸಂಖ್ಯೆ
ಇರುವುದು ಲಿಂಗಾಯತ ಸಮಾಜದಲ್ಲಿ ಮಾತ್ರ ಎಂದವರು ಹೇಳಿದರು.

ಶಿಕ್ಷಣ ಸಂಸ್ಥೆಗಳು ನಿರಂತರವಾಗಿ ಹರಿಯುವ ನದಿಗಳಿದ್ದಂತೆ. ಅವುಗಳನ್ನು ಉಳಿಸಿ ಗುಣಮಟ್ಟವನ್ನು ಹೆಚ್ಚಿಸಿ ಬೆಳೆಸುವುದು ಅಗತ್ಯವಾಗಿದೆ. ಅಂತಹ ಶಿಕ್ಷಣ ಸಂಸ್ಥೆಗಳ ಪೈಕಿ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ ಅತ್ಯುನ್ನತ ಮಟ್ಟದಲ್ಲಿ ಬೆಳೆಯಬೇಕು. ನಾಡಿನ, ದೇಶದ
ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಅದು ಒಂದಾಗಬೇಕು ಎಂದು ತಮ್ಮ ಆಶಯವನ್ನು
ಜಾಮದಾರ್ ವ್ಯಕ್ತಪಡಿಸಿದರು.

ಸುವರ್ಣ ಸಂಭ್ರಮ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ.ಗುಡಸಿ ಮಾತನಾಡಿ, ತಮ್ಮ ಜೀವನದಲ್ಲಿ ಮಹತ್ತರವಾದ ತಿರುವು ಸಿಕ್ಕಿದ್ದೆ ಈ ಶಾಲೆಯಲ್ಲಿ. ಆ ಶಾಲೆಯನ್ನು ಕಟ್ಟಿದ್ದು ಅತ್ಯುತ್ತಮ ಶಿಕ್ಷಕರು ಮತ್ತು ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ್ದ ಈ
ಶಿಕ್ಷಣ ಸಂಸ್ಥೆಯಲ್ಲಿ ತಾವು ಕಲಿತದ್ದೆ ತಮ್ಮ ಇಂದಿನ ಈ ಸ್ಥಿತಿಗೆ ಕಾರಣ ಎಂದು
ಹೇಳಿದರು.

ಪ್ರಸಾದ ನಿಲಯದಲ್ಲಿನ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಅವರು ಅಂದಿನ
ಶಿಕ್ಷಕರು ಲಿಂಗೈಕ್ಯ ಶ್ರೀಗಳ ಮಾತ್ರ ಹೃದಯದ ನಡವಳಿಕೆ ಅಂದು ಸಿಪಾಯಿಯಾಗಿದ್ದ ಈರಪ್ಪ
ಎಂಬುವರು ತಂದೆ- ತಾಯಿಯಂತೆ ಪ್ರಸಾದ ನಿಲಯದ ಮಕ್ಕಳನ್ನು ನೋಡಿಕೊಳ್ಳುತ್ತಿದ್ದುದನ್ನು
ನೆನಪಿಸಿಕೊಂಡರು. ಉತ್ತಮ ಶಿಕ್ಷಣದೊಂದಿಗೆ ನೈತಿಕತೆಯನ್ನು ಸಂಸ್ಕೃತಿಯನ್ನು ಬದುಕಬೇಕಾದ
ಪದ್ಧತಿಯನ್ನು ಕಲಿಸಿ ಕಾಡುಗಲ್ಲಾಗಿದ್ದ ತಮ್ಮನ್ನು ಮೂರ್ತಿಯಾಗಿ ಮಾಡಿ ಸಮಾಜಕ್ಕೆ
ನೀಡಿದ ಶಾಲೆ ಇದು ಎಂದವರು ಹೇಳಿದರು.

ತಮಗೆ ಎಲ್ಲವನ್ನೂ ಕಲಿಸಿದ ಎಲ್ಲವನ್ನು ನೀಡಿದ ಈ ಶಾಲೆಯು ಕೇಂದ್ರೀಯ ವಿದ್ಯಾಲಯದಂತೆ,
ಆಕ್ಸ್‌ಫರ್ಡ್ ಯೂನಿವರ್ಸಿಟಿಯಂತೆ, ಹೆಸರಾಂತ ಶಿಕ್ಷಣ ಸಂಸ್ಥೆಗಳಂತೆ ಬೆಳೆದು
ಹೆಸರುವಾಸಿಯಾಗಲಿ ಎಂದು ಅವರು ಶುಭ ಹಾರೈಸಿದರು.

ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಲಿಂಗೈಕ್ಯ ಶಿಕ್ಷಕರಾದ ಜಿ.ಎಸ್. ರಾಜ ನಾಯಕರ,
ಎಸ್‌.ಬಿ. ಹಿರೇಮಠ, ಎಸ್‌.ಸಿ. ಬಂದಕ್ನವರ, ಎಸ್ .ಎಸ್ .ಮುತಾಲಿಕ ದೇಸಾಯಿ, ಬಿ.ಸಿ. ಕಟ್ಟಿ,
ಐ.ಕೆ. ಕಿತ್ತೂರ, ಎ.ಕೆ. ಪುರಾಣಿಕ, ವಯೋವೃದ್ಧರಾಗಿರುವ ಶಿಕ್ಷಕರಾದ ಸಿ.ಆರ್.
ಹಿರೇಮಠ, ಎಸ್.ಆರ್. ಹಿರೇಮಠ, ಬಿ.ಜಿ.ಸಾರಂಗಮಠ, ಜಯಶೀಲಾ ಬ್ಯಾಕೋಡ,
ಎಸ್ .ಜಿ‌ ತಾರಳಿ, ಎಸ್.ಬಿ. ತಲ್ಲೂರ, ಜೆ.ಸಿ. ಕರ್ಕಿ, ಎಸ್. ಎಸ್.ಮಾನಿ, ಎಸ್. ಎಸ್.
ಕಲ್ಲೋಳಿಮಠ, ಐ.ಬಿ.ಹಡಪದ, ಎಸ್.ಎ.ಅಲ್ಲಪ್ಪನವರ, ಎಸ್. ಎಸ್.ಪಾಟೀಲ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಉಪಸ್ಥಿತರಿದ್ದರು.

ಹುಬ್ಬಳ್ಳಿ ಮೂರುಸಾವಿರ
ಮಠದ ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಸ್ವಾಮಿಗಳು ಸಾನ್ನಿದ್ಯ ವಹಿಸಿದ್ದರು.
ಅಧ್ಯಕ್ಷತೆಯನ್ನು ಹಂದಿಗುದ ವಿರಕ್ತಮಠದ ಶ್ರೀ ಶಿವಾನಂದ ಸ್ವಾಮಿಗಳು
ವಹಿಸಿದ್ದರು. ನೇತೃತ್ವವನ್ನು ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ
ಶ್ರೀ ಮಡಿವಾಳ ರಾಜಯೋಗಿಂದ್ರ ಸ್ವಾಮಿಗಳು ವಹಿಸಿ ಆಶಿರ್ವಚನ ನೀಡಿದರು.

ನಾಗನೂರು
ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಸ್ವಾಮೀಜಿಯವರು
ಉಪಸ್ಥಿತರಿದ್ದರು. ಪಿ.ಜಿ. ಹುಣಶ್ಯಾಳದ ಸಿದ್ಧಲಿಂಗ ಕೈವಲ್ಯಾಶ್ರಮದ
ಶ್ರೀ.ನಿಜಗುಣ ದೇವರು ಅವರಿಗೆ ಷಷ್ಟಿಪೂರ್ತಿ ಅಭಿನಂದನೆ ಸಲ್ಲಿಸಲಾಯಿತು.
“ಸುವರ್ಣ ಸಂಭ್ರಮ” ಸ್ಮರಣ ಸಂಚಿಕೆಯ ಸಂಪಾದಕಿ ಹಿರಿಯ ಸಾಹಿತಿ ಡಾ.ಗುರುದೇವಿ
ಹುಲೆಪ್ಪನವರಮಠ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ ಹಾಗೂ
ಪ್ರಾಥಮಿಕ ಶಾಲೆಯ ಹಳೆಯ ಸಾಧಕ ವಿದ್ಯಾರ್ಥಿಗಳಾದ ವಿಧಾನ ಪರಿಷತ್ ಸದಸ್ಯ ಶರಣಗೌಡ
ಪಾಟೀಲ ಬಯ್ಯಾಪುರ, ಬಾಗಲಕೋಟೆಯ ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ ಶಶಿಧರ
ಬಗಲಿ, ಪುಣೆಯ ಉದ್ಯಮಿ ಅಣ್ಣಾರಾಯ ಬಿರಾದಾರ, ವಿಜಯಪುರದ ಕೈಗಾರಿಕಾ ಇಲಾಖೆ
ವಿಶೇಷ ಕರ್ತವ್ಯಾಧಿಕಾರಿ ಮಹಾಂತೇಶ ಬಿರಾದರ, ಬೆಳಗಾವಿಯ ಹಿರಿಯ ನ್ಯಾಯವಾದಿ ದಿನೇಶ ಪಾಟೀಲ, ಕೊಪ್ಪಳದ ಶಿವಾನಂದ ಮೂಲಿಮನಿ,
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಮಲ್ಲನಗೌಡ ಪಾಟೀಲ, ಮುಂಡರಗಿಯ ಎಇಇ ಅಶೋಕ್ ಕಣವಿ ಮತ್ತು ವೈದ್ಯ ಡಾ.ಈಶ್ವರ ಕಣಬೂರ ಅವರನ್ನು
ಸನ್ಮಾನಿಸಲಾಯಿತು.
ಅಶೋಕ ಮಳಗಲಿ ಪ್ರಾಸ್ಥಾವಿಕ, ಸ್ವಾಗತಿಸಿದರು, ಪ್ರೊ. ಮಂಜುನಾಥ
ಶರಣಪ್ಪನವರ ಮತ್ತು ರಾಜಶೇಖರ ಪಾಟೀಲ ನಿರೂಪಿಸಿದರು.
ಪ್ರೊ.ಎ.ಕೆ.ಪಾಟೀಲ ವಂದಿಸಿದರು.