ಮಡಾಮಕ್ಕಿಯ ಮಾಡು ಒಲ್ಲದ ವೀರಭದ್ರ ದೇವಳದಲ್ಲಿ ಜಾತ್ರಾ ಮಹೋತ್ಸವ ವೈಭವದಿಂದ ನಡೆಯಲಿದೆ. ವೀರಭದ್ರ ದೇವರ ಜಾತ್ರೆಗೆ ಆಗಮಿಸುವುದು ಸುತ್ತಮುತ್ತಲಿನ ಊರಿನ ಜನತೆಗೆ ಅತ್ಯಂತ ಸಂಭ್ರಮೋತ್ಸಾಹ. ಶ್ರೀ ವೀರಭದ್ರ ಸ್ವಾಮಿಯ ಜಾತ್ರೆಯಲ್ಲಿ ಭಾಗವಹಿಸಿ ಕೃತಾರ್ಥರಾಗಲು ಊರ- ಪರವೂರ ಜನತೆ ಆಗಮಿಸುತ್ತಾರೆ. ಶ್ರೀ ದೇವರ ದರ್ಶನ ಪಡೆದು ಹರಕೆ ತೀರಿಸುವ ಪರಂಪರೆ ಮೊದಲಿನಿಂದಲೂ ನಡೆದು ಬಂದಿದೆ. ಶ್ರೀ ವೀರಭದ್ರ ಸ್ವಾಮಿ ತಾನು ನಂಬಿದ ಭಕ್ತರ ಆಶ್ರಯದಾತ, ರಕ್ಷಕ. ಮಾತ್ರವಲ್ಲ ಭಕ್ತರ ಜಾನುವಾರುಗಳನ್ನು ಕಾಪಾಡುವ ದೇವರು ಎಂಬ ನಂಬಿಕೆ ಅತ್ಯಂತ ಅಚಲವಾಗಿದೆ.

ಮಡಾಮಕ್ಕಿ :
ಮಾಡು ಒಲ್ಲದ ಖ್ಯಾತಿಯ ಮಡಾಮಕ್ಕಿ ಮಹತೋಭಾರ
ವೀರಭದ್ರ ದೇವಸ್ಥಾನದಲ್ಲಿ ಫೆ.9 ನೇ ಶುಕ್ರವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜಾತ್ರಾ ಮಹೋತ್ಸವ ,ಕೆಂಡಸೇವೆ, ಧಾರ್ಮಿಕ,
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ದೇವಳವು ಸಾವಿರ ವರ್ಷಕ್ಕೂ ಮಿಕ್ಕಿ ಇತಿಹಾಸದೊಂದಿಗೆ ಪ್ರಸಿದ್ದ ಬಾರ್ಕೂರು ಅರಸರ ಆಳ್ವಿಕೆಗೊಳಪಟ್ಟಿದೆ ಎಂದು ಶಿಲಾಶಾಸನವಿದ್ದು ದೇವಳವು ನೇಪಾಳಿ ಶೈಲಿಯಲ್ಲಿದೆ.

ವೀರಭದ್ರ ದೇವರಿಗೆ ಗರ್ಭಗುಡಿಯೇ ಇಲ್ಲ, ಆದ್ದರಿಂದ ಈ ದೇವಳಕ್ಕೆ “ಮಾಡು ಒಲ್ಲದ ವೀರಭದ್ರ ” ಕ್ಷೇತ್ರವೆಂದು ಪ್ರಸಿದ್ದಿ. ಉತ್ತರದಿಂದ ದಕ್ಷಿಣಕ್ಕೆ ಹರಿಯುವ ಮಡಾಮಕ್ಕಿ ನದಿಯ ತಟದಲ್ಲಿ ಜರಗುವ ಜಾತ್ರೆಯಲ್ಲಿ ವಿವಿಧೆಡೆಗಳಿಂದ ಆಗಮಿಸುವ ಸಾವಿರಾರೂ ಭಕ್ತರು ಕ್ಷೇತ್ರದ ಮಹಿಮೆಗೆ ಸಾಕ್ಷಿಯಾಗಲಿದ್ದಾರೆ.

ಹಿನ್ನೆಲೆ:
ಪುರಾತನ ಕಾಲದಲ್ಲಿ ರಕ್ಕಸರ ಅಟ್ಟಹಾಸ ಹೆಚ್ಚಿದಾಗ
ವೃಷಭಯೋಗೇಶ್ವರ ಮುನಿಯು ಶಿವನನ್ನು ಕುರಿತು ಸುದೀರ್ಘ ತಪಸ್ಸು ಮಾಡಿದಾಗ ಶಿವಪುತ್ರ ವೀರಭದ್ರ ಪ್ರತ್ಯಕ್ಷನಾಗಿ ರಕ್ಕಸರನ್ನು ಕಂಡು ಕೋಪೋದ್ರಿಕ್ತನಾಗಿ ತನ್ನ ತಲೆಯನ್ನು ಸಮೀಪದ ದೊಡ್ಡ ಶಿಲೆಗೆ ಬಡಿದನಂತೆ. ಬಡಿತಕ್ಕೆ ಶಿಲೆ ಚೂರು ಚೂರಾಗಿ ಸಿಡಿಯಿತು. ಸಿಡಿದ ಅರ್ಧ ಚಂದ್ರಾಕೃತಿಯ ಒಂದು ಶಿಲೆಯನ್ನು
ವೃಷಭಯೋಗೇಶ್ವರ ಮುನಿ ತಂದು ಮಡಾಮಕ್ಕಿ ಸಮೀಪದ ದೊಡ್ಡ ಬಾವಿಯಲ್ಲಿ ಮಡಾಮಕ್ಕಿ, ಬೇಳಂಜೆ ಸಂಸ್ಥಾನಗಳ ರಾಜರ ರತ್ನ ವೈಢೂರ್ಯಾದಿಗಳನ್ನು ತಂದು ಬಾವಿಯಲ್ಲಿ ಹಾಕಿ ಭದ್ರಗೊಳಿಸಿ ಅದಕ್ಕೆ ಮಣ್ಣಿನ ಕಟ್ಟೆಯನ್ನು ಕಟ್ಟಿ ಅದರ ಮೇಲೆ ತಂದು ಶಿಲೆಯನ್ನು ಪ್ರತಿಷ್ಠೆ ಮಾಡಿದನೆಂದು ಪುರಾಣದಲ್ಲಿ ಉಲ್ಲೇಖವಿದೆ., ವೀರಭದ್ರ ಮೊಣಕಾಲುನ್ನು ಊರಿ ನೆಲೆಯಾದ ಸ್ಥಳಕ್ಕೆ
ಊರಿಗೆ ಮಡಾಮಕ್ಕಿ ಎಂಬ ಹೆಸರು ಬಂದಿದೆ ಎಂದು, ಕ್ಷೇತ್ರಕ್ಕೆ ಕೋಟೆರಾಯ ಪರಿವಾರಗಳು ದೇವಗಣಗಳು ರಕ್ಷಣೆಯಲ್ಲಿದೆ ಎಂದು ಪ್ರತೀತಿ. ಇಲ್ಲಿ ಅರ್ಧಚಂದ್ರಾಕೃತಿಯ ಶಿಲೆಯೇ ವೀರಭದ್ರನ
ಸಾನ್ನಿಧ್ಯ.ವೀರಭದ್ರ ನೆಲೆನಿಂತ ಮಣ್ಣಿನ ಕಟ್ಟೆಯ
ಮಣ್ಣು(ಮೃತ್ತಿಕೆ) ಪ್ರಸಾದ ರೂಪವಾಗಿ ಭಕ್ತರಿಗೆ ಹಂಚುವುದು ವಿಶೇಷ.ಜಾತ್ರಾ ಮಹೋತ್ಸವ, ಕೆಂಡ ಸೇವೆ ದಿನದಂದು ತುಲಾಭಾರ,  ಮಹಾ ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಮಹಾ ಅನ್ನ ಸಂತರ್ಪಣೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ, ರಾತ್ರಿ ಶ್ರೀ ವೀರಭದ್ರೇಶ್ವರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ನೃತ್ಯಸೇವೆ, ವೀರಭದ್ರಸ್ವಾಮಿ, ಬನಶಂಕರಿ ದೇವಿಯ ದರ್ಶನ, ಕೆಂಡಸೇವೆ, ರಂಗಪೂಜೆ,ಢಮರುಸೇವೆ, ಪರಿವಾರ ದೇವತೆಗಳ ಕೋಲ ಸೇವೆ, ವೀರಭದ್ರ ಸ್ವಾಮಿ ದರ್ಶನದಲ್ಲಿ ಪಾತ್ರಿಯು ಚೂಪಾದ ಮುಳ್ಳಿನ ಪಾದುಕೆಯನ್ನು ಧರಿಸಿ ವೀರಭದ್ರನ ಮಣ್ಣಿನ ಕಟ್ಟೆಯ(ಸನ್ನಿಧಾನ)ವನ್ನು ಪ್ರದಕ್ಷಿಣೆ ಬರುವುದು ಕ್ಷೇತ್ರದಲ್ಲಿ ವಿಶೇಷವಾಗಿದೆ. ಕ್ಷೇತ್ರದ ಯಕ್ಷಗಾನ ಮೇಳವು ಯಶಸ್ವಿ ತಿರುಗಾಟದೊಂದಿಗೆ ಕ್ಷೇತ್ರದ ಕೀರ್ತಿಯನ್ನು ಹೆಚ್ಚಿಸುವಲ್ಲಿ ತನ್ನದೇ ಆದ ಪಾತ್ರ ವಹಿಸುತ್ತಿರುವುದು ಪ್ರಶಂಸನೀಯ.

ದೇವಳದ ಅಭಿವೃದ್ದಿ ಸಮಿತಿ ಅಧ್ಯಕ್ಷ ಎಂ.ಶಶಿಧರ ಶೆಟ್ಟಿ
ಮಡಾಮಕ್ಕಿ, ಕ್ಷೇತ್ರದ ಆಡಳಿತದಾರ ಹಾಗೂ ಮುಖ್ಯ ಅರ್ಚಕ ಕೃಷ್ಣಮೂರ್ತಿ ಮಂಜ ಮಡಾಮಕ್ಕಿ, ಊರ_ ಪರವೂರ ಭಕ್ತರು, ದಾನಿಗಳ ಸಹಕಾರದಿಂದ ಮಡಾಮಕ್ಕಿ ಕ್ಷೇತ್ರವು ಅಭಿವೃದ್ಧಿಯೊಂದಿಗೆ
ಪುಣ್ಯ ಕ್ಷೇತ್ರವಾಗಿ ಖ್ಯಾತಿ ಗಳಿಸಿದೆ. ವಿರಾಜಪೇಟೆ- ಬೈಂದೂರು ರಾಜ್ಯ ಹೆದ್ದಾರಿಯ ಮಡಾಮಕ್ಕಿಯಿಂದ 1 ಕಿ.ಮೀ ದೂರದಲ್ಲಿದೆ. ಹೆಬ್ರಿ-ಮಾಂಡಿ ಮೂರುಕೈ, ಸೋಮೆಶ್ವರ-ಹಾಲಾಡಿ ಮಾರ್ಗವಾಗಿ ದೇವಳಕ್ಕೆ
ತಲುಪಬಹುದು.

ಕಾರ್ಯಕ್ರಮಗಳು:
ಫೆ.9 ನೇ ಶುಕ್ರವಾರ ಬೆಳಗ್ಗೆ ಗಣೇಶ ಪ್ರಾರ್ಥನೆ, ಪುಣ್ಯಾಹ, ನವಕ ಪ್ರಧಾನ ಹೋಮ ಕಲಶ,ಶತ ರುದ್ರಭೀಷೇಕ, ಮಧ್ಯಾಹ್ನ ಗಂ.12 ಕ್ಕೆ ಮಹಾಪೂಜೆ, ಗಂ.12.30 ಕ್ಕೆ ತುಲಾಭಾರ ಸೇವೆ, ಗಂ.12.45 ರಿಂದ ಗಂ.3 ರ ತನಕ ಅನ್ನಸಂತರ್ಪಣೆ, ರಾತ್ರಿ ಗಂ 8 ಕ್ಕೆ ಕೆಂಡ ಸೇವೆಗೆ ಅಗ್ನಿ ಸ್ಪರ್ಶ, ಯಕ್ಷಗಾನ ನೃತ್ಯಸೇವೆ, ಗಂ 9.30 ರಿಂದ ಶ್ರೀ ಸ್ವಾಮಿ ಹಾಗೂ ಅಮ್ಮನವರ ದರ್ಶನ, ಕೆಂಡ ಸೇವೆ, ಗಂ.10.30 ರಿಂದ ಪರಿವಾರ ದೈವಗಳ ಕೋಲ ಹಾಗೂ ದರ್ಶನ, ಗಂ.1.30 ರಿಂದ ರಂಗ ಪೂಜೆ, ಢಮರು ಸೇವೆ, ಸುತ್ತು ಬಲಿ, ಸ್ವಾಮಿ ದರ್ಶನ,ಪ್ರಸಾದ ವಿತರಣೆ ನಡೆಯಲಿದೆ.