ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಇರುವ ಅತ್ಯಂತ ಸುಂದರ ಊರು ಅರಸಮ್ಮ ಕಾನು. ಅತ್ಯಂತ ಪ್ರಾಚೀನ ಹಿನ್ನೆಲೆ ಹೊಂದಿರುವ ಅರಸಮ್ಮಕಾನಿನಲ್ಲಿಂದು ನಾಗಕನ್ನಿಕಾ ದುರ್ಗಾದೇವಿಯ ವೈಭವದ ಜಾತ್ರಾ ಮಹೋತ್ಸವ. ದೇವಿಯ ದರ್ಶನ ಪಡೆದು ಪುನೀತರಾಗಲು ಊರ-ಪರವೂರ ಸಹಸ್ರಾರು ಭಕ್ತರು ಆಗಮಿಸುತ್ತಿರುವುದು ಕ್ಷೇತ್ರಕ್ಕೆ ಇರುವ ಕಾರಣಿಕವನ್ನು ತೋರಿಸುತ್ತದೆ. ಅರಸಮ್ಮ ಕಾನಿನಲ್ಲಿ  ಶತಶತಮಾನಗಳಿಂದ ನೆಲೆಯೂರಿ ಭಕ್ತರ ಪೋಷಿಸುವ ಶ್ರೀ ಶಕ್ತಿ ದೇವತೆಗೆ ಇಂದು ಅದ್ದೂರಿ ಜಾತ್ರಾ ಮಹೋತ್ಸವದ ಸಡಗರ. ಜಾತ್ರೆಯ ಹಿನ್ನೆಲೆಯಲ್ಲಿ ಅರಸಮ್ಮ ಕಾನು ಸೇರಿದಂತೆ ನೆರೆಹೊರೆಯ ಊರುಗಳಲ್ಲಿ ಸಂಭ್ರಮ ಕಳೆಗಟ್ಟಿದೆ. ದೇವಿಯ ದರ್ಶನ ಭಾಗ್ಯ ಪಡೆದು ಪುನೀತರಾಗಲು ಎಲ್ಲರೂ ತವಕಿಸುತ್ತಿರುವುದು ಗಮನಸೆಳೆದಿದೆ.

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶೇಡಿಮನೆ ಗ್ರಾಮದ ಅರಸಮ್ಮಕಾನು ಎಂಬ ಪುಟ್ಟ ಊರಿನಲ್ಲಿ ನಾಗಕನ್ನಿಕಾ ದುರ್ಗಾಪರಮೇಶ್ವರಿ ಎಂಬ ಕಾರಣಿಕ ದೇವಸ್ಥಾನವಿದೆ. ಪುರಾತನ ಇತಿಹಾಸ ಇರುವ ಈ ಪುರಾಣ ಪ್ರಸಿದ್ಧ ದೇವಾಲಯ ಅಸಂಖ್ಯಾತ ಸದ್ಭಕ್ತರ ಪಾಲಿನ ಶ್ರೇಷ್ಠ ತಾಣವಾಗಿದೆ.

ಸೂರ್ಯ ಮಕರ ರಾಶಿ ಪ್ರವೇಶಿಸುವ ಪುಣ್ಯಕಾಲದ ಪವಿತ್ರ ದಿನವಾದ ಮಕರ ಸಂಕ್ರಾಂತಿಯ ದಿನದಂದು ಅರಸಮ್ಮಕಾನು ಜಾತ್ರೆಯ ವೈಭವ. ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುವ ಜಾತ್ರಾ ಮಹೋತ್ಸವದಲ್ಲಿ ನಂಬಿದ ಅಪಾರ ಸಂಖ್ಯೆಯ ಭಕ್ತರು ದೂರ ದೂರದ ಊರುಗಳಿಂದ ಆಗಮಿಸುವರು.

ಬಹಳ ಹಿಂದೆ ಶಂಖಚೂಡ ರಾಜ ತನ್ನ ರಾಜ್ಯ ಕಳೆದುಕೊಂಡ ನಂತರ ಅವನು ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಬೆಂಕಿಗೆ ಆಹುತಿಯಾಗುತ್ತಿದ್ದ ಸರ್ಪಗಳನ್ನು ಕಂಡು ಅವುಗಳನ್ನು ರಕ್ಷಣೆ ಮಾಡಿದ. ಅವನು ಅವುಗಳನ್ನು ರಕ್ಷಿಸಿಕೊಂಡು ತೆಗೆದುಕೊಂಡು ಹೋಗುತ್ತಿರುವಾಗ ಐದು ಸರ್ಪಗಳಲ್ಲಿ ಹಿರಿಯ ಹಾವು ದೇವರತಿ ಅರಸಮ್ಮಕಾನು ಎಂಬಲ್ಲಿ ನೆಲೆ ನಿಂತರೆ, ಮಂದಾರ್ತಿಯಲ್ಲಿ ಮಂದರತಿ, ಚೋರಾಡಿಯಲ್ಲಿ ಚಾರುರತಿ, ನಾಗೇರ್ತಿಯಲ್ಲಿ ನಾಗರತಿ, ನೀಲಾವರದಲ್ಲಿ ನೀಲರತಿ.ಹೀಗೆ ಐದು ಸರ್ಪಗಳು ಬೇರೆ ಬೇರೆ ಕಡೆಗಳಲ್ಲಿ ದೇವತಾ ಸ್ವರೂಪಿಯಾಗಿ ನೆಲೆಯಾದರು ಎಂಬ ಪೌರಾಣಿಕ ಕಥೆ ತುಂಬಾ ರೋಚಕವಾಗಿದೆ. ಹಿರಿಯ ಸರ್ಪವಾದ ದೇವರತಿಯನ್ನು *ಅರಸಮ್ಮ* ಎಂದು ಕರೆಯಲಾಯಿತು, ಅಂದಿನಿಂದ ಈ ಪುಣ್ಯ ಸ್ಥಳಕ್ಕೆ ಅರಸಮ್ಮಕಾನು ಎಂಬ ಹೆಸರು ಪ್ರಚಲಿತಕ್ಕೆ ಬಂದಿತು.

ಮಕರ ಸಂಕ್ರಾಂತಿಯ ಶುಭದಿನದಂದು ಅನೇಕ ಧಾರ್ಮಿಕ ವಿಧಿ ವಿಧಾನಗಳಿಂದ ಶ್ರದ್ಧಾ ಭಕ್ತಿಯಿಂದ ದುರ್ಗಾದೇವಿಯನ್ನು ಆರಾಧಿಸಲಾಗುತ್ತದೆ. ದೇವಿಯ ಸನ್ನಿಧಾನದಲ್ಲಿ ತುಲಾಭಾರ, ಹರಿವಾಣ ನೈವೇದ್ಯ, ಮಂಗಳಾರತಿ, ಕರ್ಪೂರದಾರತಿ, ಕೆಂಡಸೇವೆ ಮುಂತಾದವುಗಳನ್ನು ನಡೆಸಲಾಗುವುದು. ಮಧ್ಯಾಹ್ನ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯುತ್ತದೆ.

ಸರ್ವ ಭಗವದ್ಭಕ್ತರಿಗೂ ಅರಸಮ್ಮಕಾನು ಜಾತ್ರೆಗೆ ಹಾರ್ದಿಕ ಸುಸ್ವಾಗತ.

✒️ ಶಶಿಧರ ಶೆಟ್ಟಿ, ಶಿಕ್ಷಕರು, ಅರಸಮ್ಮಕಾನು.