ಬೆಳಗಾವಿ : ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪದಲ್ಲಿ ಜೈಲು ಪಾಲಾಗಿರುವ ವ್ಯಕ್ತಿಯೊಬ್ಬ ಜೈಲಿನಲ್ಲಿ ತನಗೆ ವಿಷ ಹಾಕಿ ಕೊಲ್ಲುವ ಯತ್ನ ನಡೆದಿದೆ ಎಂದು ಆರೋಪಿಸಿದ್ದಾನೆ. ಜೈಲಲ್ಲಿ ತನಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ, ತನ್ನ ವಕೀಲರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪ ಮಾಡಿದ್ದಾನೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ಹಣದ ಬೆದರಿಯೊಡ್ಡಿದ್ದ ಈತ ಹಣ ಕೊಡದೇ ಇದ್ದಲ್ಲಿ ಕೊಲೆ ಬೆದರಿಕೆ ಹಾಕಿದ್ದ ಆರೋಪದಲ್ಲಿ ಹಿಂಡಲಗಾ ಜೈಲು ಪಾಲಾಗಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಮೂಲದ ಜಯೇಶ್ ಪೂಜಾರಿ ಅಲಿಯಾಸ್ ಶಕೀಲ್ ಇಲ್ಲಿನ ಜೈಲು ಸಿಬ್ಬಂದಿ ತನಗೆ ಊಟದಲ್ಲಿ ವಿಷ ಹಾಕಿ ಕೊಲ್ಲುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾನೆ. ನನಗೆ ಇಲ್ಲಿ ಜೀವಂತವಾಗಿ ಇರಲು ಬಿಡುತ್ತಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ಕುತ್ತಿಗೆಯನ್ನು ಕೊಯ್ದುಕೊಂಡಿದ್ದೇನೆ. ಆದರೆ, ನಾನು ಬದುಕುಳಿದೆ. ಆದರೂ, ಜೈಲಿನ ಸಿಬ್ಬಂದಿ ನನಗೆ ಸೂಕ್ತ ಚಿಕಿತ್ಸೆ ಕೊಡಿಸುತ್ತಿಲ್ಲ.
ನಾನು ಜಾಮೀನಿಗಾಗಿ ಹಾಗೂ ಇಲ್ಲಿನ ಭಯದ ವಾತಾವರಣಕ್ಕೆ ನಾನು ನಲುಗಿ ಹೋಗಿದ್ದು, ವಕೀಲರಿಗೆ ಈ ಬಗ್ಗೆ ಅರ್ಜಿ ಸಲ್ಲಿಕೆ ಮಾಡಿದ್ದೇನೆ. ಆದರೂ, ಜೈಲು ಸಿಬ್ಬಂದಿ ನನ್ನ ಅರ್ಜಿಯನ್ನು ವಕೀಲರಿಗೆ ತಲುಪಿಸಿಲ್ಲ ಎಂದು ಜೈಲು ಸಿಬ್ಬಂದಿ ವಿರುದ್ಧವೇ ಆರೋಪ ಮಾಡಿದ್ದಾನೆ. ಈ ಬಗ್ಗೆ ಸ್ವತಃ ಜಯೇಶ್ ಪೂಜಾರಿಯೇ ಜೈಲಿನಲ್ಲಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಬಗ್ಗೆ ದೇಶದಾದ್ಯಂತ ಜೈಲಿನ ವ್ಯವಸ್ಥೆಗಳ ಬಗ್ಗೆಯೂ ಚರ್ಚೆ ಆಗುವಂತೆ ಮಾಡಿದ್ದಾನೆ.ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ :
ಕೆಲವು ತಿಂಗಳುಗಳ ಹಿಂದೆ ಬೆಳಗಾವಿ ನ್ಯಾಯಾಲಯಕ್ಕೆ ವಿಚಾರಣೆಗೆ ಕರೆತಂದಾಗ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ. ಘೋಷಣೆ ಕೂಗುತ್ತಿದ್ದಂತೆ ವಕೀಲರು ಮತ್ತು ಸಾರ್ವಜನಿಕರು ಆತನಿಗೆ ಧರ್ಮದೇಟು ನೀಡಿದರು. ಧರ್ಮದೇಟು ಬೀಳುತ್ತಿದ್ದಂತೆ ಪಾತಕಿ ಜಯೇಶ್ ಪೂಜಾರಿಯನ್ನು ರಕ್ಷಣೆ ಮಾಡಿ ಪೊಲೀಸರು ಎಪಿಎಂಸಿ ಠಾಣೆಗೆ ಕರೆದುಕೊಂಡು ಹೋಗಿದ್ದರು.ಮಾಹಿತಿ ಪ್ರಕಾರ ಜಯೇಶ್ ಪೂಜಾರಿ ಅಲಿಯಾಸ್ ಜಯೇಶ್ ಕಾಂತ್ ಕಳೆದ ವರ್ಷ ಜನವರಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ. 10 ಕೋಟಿ ನೀಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಪ್ರಕರಣವನ್ನು ದಾಖಲಿಸಿಕೊಂಡು ಮಹಾರಾಷ್ಟ್ರ ಪೊಲೀಸರು ತನಿಖೆ ನಡೆಸಿದ ವೇಳೆ ಮಂಗಳೂರಿನ ಡಬಲ್ ಮರ್ಡರ್ ಆರೋಪಿ ಹಾಗೂ ವಿವಿಧ ಪ್ರಕರಣಗಳ ಪ್ರಮುಖ ಆರೋಪಿ ಜಯೇಶ್ ಪೂಜಾರಿ ಜನವರಿ 14 ಮತ್ತು ಮಾರ್ಚ್ 21 ರಂದು ಹಿಂಡಲಗಾ ಜೈಲಿನಿಂದ ಸೆಲ್ ಫೋನ್ ಬಳಸಿ ಗಡ್ಕರಿ ಅವರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದು ಪತ್ತೆಯಾಗಿತ್ತು. ಅಲ್ಲದೆ ಈತನಿಗೆ ಭಯೋತ್ಪಾದಕ ಅಫ್ಸರ್ ಪಾಶಾನ ನಂಟು ಸಹ ಇರುವುದು ಬೆಳಕಿಗೆ ಬಂದಿತ್ತು.